ದೇಶ

ಸಮಸ್ಯೆ ಇದ್ದರೆ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಡಿ: ವಿಪಕ್ಷಗಳಿಗೆ ರವಿಶಂಕರ್ ಪ್ರಸಾದ್ ತಿರುಗೇಟು

Srinivasamurthy VN

ನವದೆಹಲಿ: ಕೊರೋನಾ ವೈರಸ್ ನಿರ್ವಹಣೆ ಸಂಬಂಧ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಆ್ಯಪ್ ನ ಸುರಕ್ಷತೆ ಕುರಿತು ವಿಪಕ್ಷಗಳ ವಾಗ್ದಾಳಿ ಮುಂದುವರೆದಿರುವಂತೆಯೇ ಇದಕ್ಕೆ ಖಡಕ್ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ ನಿಮಗೆ ಸಮಸ್ಯೆ ಇದ್ದರೆ ಆರೋಗ್ಯ  ಸೇತು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಡಿ ಎಂದು ಹೇಳಿದೆ.

ಆರೋಗ್ಯ ಸೇತು ಆ್ಯಪ್ ನ ನಕಲಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಗಡಿಯಲ್ಲಿ ಬಿಡುಗಡೆ ಮಾಡುವ ಮೂಲಕ ಭಾರತೀಯ ಸೇನೆಯ ಮೇಲೆ ನಿಗಾ ಇರಿಸುವ ಕೆಲಸ ಮಾಡುತ್ತಿದೆ ಎಂಬ ಗುಪ್ತಚರ ಮಾಹಿತಿ ಬೆನ್ನಲ್ಲೇ ಆರೋಗ್ಯ ಸೇತು ಆ್ಯಪ್ ನ ಸುರಕ್ಷತೆ ಕುರಿತು ಪ್ರತಿಪಕ್ಷಗಳು  ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಅಲ್ಲದೆ ಆರೋಗ್ಯ ಸೇತು ಆ್ಯಪ್ ಮೂಲಕ ಕೇಂದ್ರ ಸರ್ಕಾರ ದೇಶದ ನಾಗರಿಕರ ಮೇಲೆ ನಿಗಾ ಇರಿಸಿದ್ದು, ವೈಯುಕ್ತಿಕ ದತ್ತಾಂಶಗಳನ್ನು ಕಲೆಹಾಕುವ ಆತಂಕವಿದೆ ಎಂದು ಕಿಡಿಕಾರಿದ್ದವು. 

ಇದೀಗ ಇದೇ ವಿಚಾರವಾಗಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು, ಆರೋಗ್ಯ ಸೇತು ಆ್ಯಪ್ ಮೇಲೆ ಅಪನಂಬಿಕೆ ಇದ್ದರೆ ಅಥವಾ ಆ್ಯಪ್ ಕುರಿತು ನಿಮಗೆ ಸಮಸ್ಯೆ ಇದ್ದರೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ. ಉಗ್ರರಿಗೆ ಮತ್ತು ಭ್ರಷ್ಟರಿಗೆ  ಖಾಸಗಿತನ ಎಂಬುದು ಇರುವುದಿಲ್ಲ. ಇಡೀ ಭಾರತ ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿದೆ. ಇದೇ ಕಾರಣಕ್ಕೆ ಆರೋಗ್ಯ ಸೇತು ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಈ ಆ್ಯಪ್ ನಮ್ಮ ಸುತ್ತಮುತ್ತಲ ಪ್ರದೇಶಕ್ಕೆ ಸೋಂಕಿತ ವ್ಯಕ್ತಿ ಬಂದರೆ ಎಚ್ಚರಿಕೆ ನೀಡುತ್ತದೆ. ಅಲ್ಲದೆ  ಕೊರೋನಾ ವೈರಸ್ ನಿರ್ವಹಣೆ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತದೆ. ಅಂತೆಯೇ ಸೋಂಕಿಗೆ ತುತ್ತಾದರೆ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಸುತ್ತದೆ. ಆರೋಗ್ಯ ಸೇತು ಆ್ಯಪ್ ನಲ್ಲಿ ದಾಖಲಾಗುವ ಮಾಹಿತಿಗಳು 30 ದಿನಗಳ  ಬಳಿಕ ತಾನೇ ತಾನಾಗಿ ಡಿಲೀಟ್ ಆಗುತ್ತದೆ. ಉಳಿದ ದತ್ತಾಂಶಗಳು 180 ದಿನಗಳ ಬಳಿಕ ಡಿಲೀಟ್ ಆಗುತ್ತದೆ ಎಂದು ಹೇಳಿದರು.

ಇದೇ ವೇಳೆ ಸ್ಮಾರ್ಟ್ ಉಪಯೋಗಿಸದ ವಲಸೆ ಕಾರ್ಮಿಕರಿಗೆ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ ಮಾಡಲಾಗಿದ್ದು, ಇವರಿಗಾಗಿ ಐವಿಎಸ್ ಮಾದರಿ ಬಿಡುಗಡೆ ಮಾಡಲಾಗಿದೆ. ಅಗತ್ಯ ಇರುವವರು ಈ ನಂಬರ್ ಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು.

SCROLL FOR NEXT