ನವದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಲಾಕ್ ಡೌನ್ ನಿಂದಾಗಿ ನಷ್ಟ ಅನುಭವಿಸಿರುವ ಖ್ಯಾತ ಟ್ಯಾಕ್ಸಿ ಸೇವಾ ಸಂಸ್ಥೆ ಓಲಾ, ತನ್ನ ಒಟ್ಟಾರೆ ಸಿಬ್ಬಂದಿಗಳ ಪೈಕಿ 1400 ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಲು ನಿರ್ಧರಿಸಿದೆ.
ಈ ಕುರಿತಂತೆ ಮಾತನಾಡಿರುವ ಓಲಾ ಸಂಸ್ಥೆಯ ಸಿಇಒ ಭವಿಷ್ ಅಗರ್ವಾಲ್ ಅವರು, ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಸಂಸ್ಥೆಯ ಶೇ.95ರಷ್ಟು ಆದಾಯ ಕುಸಿದಿದೆ. ಸಂಸ್ಥೆಯ ಆರ್ಥಿಕ ಸೇವೆ ಮತ್ತು ಆಹಾರ ಉದ್ದಿಮೆಯ ಆದಾಯ ಕೂಡ ಕಳೆದ 2 ತಿಂಗಳಲ್ಲಿ ತೀವ್ರ ಪ್ರಮಾಣದಲ್ಲಿ ಕುಸಿದಿದೆ. ಹೀಗಾಗಿ ಓಲಾ ತನ್ನ 1400 ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಸಿಬ್ಬಂದಿಗಳಿಗೆ ಇ-ಮೇಲ್ ಮಾಡಿರುವ ಅಗರ್ವಾಲ್ ಅವರು, ಮುಂದಿನ ವ್ಯವಹಾರ "ತುಂಬಾ ಅಸ್ಪಷ್ಟ ಮತ್ತು ಅನಿಶ್ಚಿತತಿಯಿಂದ ಕೂಡಿದೆ. ಕೊರೋನಾ ಬಿಕ್ಕಟ್ಟಿನ ಪರಿಣಾಮ ಖಂಡಿತವಾಗಿಯೂ ನಮಗೆ ದೀರ್ಘಾವಧಿಯವರೆಗೆ ಕಾಡುತ್ತದೆ. ಕೊರೋನಾ ಸಾಂಕ್ರಾಮಿಕದಿಂದಾಗಿ ಉದ್ದಿಮೆ ನೆಲಮಟ್ಟಕ್ಕೆ ಕುಸಿದಿದ್ದು, ತುಂಬಾ ಕಠಿಣ ಹಾದಿಯಲ್ಲಿ ನಾವಿದ್ದೇವೆ. ನಮ್ಮ ಆದಾಯದಲ್ಲಿ ಶೇ.95ರಷ್ಟು ಕುಸಿತ ಕಂಡು ಬಂದಿದೆ. ಈ ಸಾಂಕ್ರಾಮಿಕ ನಮ್ಮ ಸಾವಿರಾರು ಚಾಲಕರು ಮತ್ತು ಅವರ ಕುಟುಂಬದ ಮೇಲೆ ದುಷ್ಪರಿಣಾಮ ಬೀರಿದೆ. ದೈನಂದಿನ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾಗಿದೆ. ಭಾರತ ಮತ್ತು ಅಂತಾರಾಷ್ಟ್ರೀಯ ಭೌಗೋಳಿಕತೆಯನ್ನೇ ಈ ಸಾಂಕ್ರಾಮಿಕ ಬದಲಿಸಿ ಬಿಟ್ಟಿದೆ. ಹೀಗಾಗಿ ಸಂಸ್ಥೆ 1400 ಉದ್ಯೋಗಿಗಳ ಕೆಲಸ ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ಅಗರ್ವಾಲ್ ಹೇಳಿದ್ದಾರೆ.