ನವದೆಹಲಿ: ವಲಸೆ ಕಾರ್ಮಿಕರ ಕುಂದುಕೊರತೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಪ್ಯಾನ್-ಇಂಡಿಯಾ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಲಿದೆ.
ಮುಖ್ಯ ಕಾರ್ಮಿಕ ಆಯುಕ್ತರ ಅಡಿಯಲ್ಲಿ ಸಹಾಯವಾಣಿಯನ್ನು ಆರಂಭಿಸಲಾಗುತ್ತಿದ್ದು ಇದು ಟೋಲ್ ಫೀ ಸಂಖ್ಯೆಯಾಗಿರುವುದಿಲ್ಲ.
ವಲಸೆ ಕಾರ್ಮಿಕರ ಕುಂದುಕೊರತೆಗಳನ್ನು ನಿಭಾಯಿಸಲು ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿಗೆ 14445 ಎಂಬ ಸಣ್ಣ ಕೋಡ್ ನ್ನು ನೀಡಲಾಗುತ್ತದೆ. ಇಡೀ ಭಾರತದ ಯಾವುದೇ ಕಡೆಯಿಂದ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ದೆಹಲಿಯ ಕಚೇರಿಯಿಂದ ನಿರ್ವಹಿಸಲಾಗುತ್ತದೆ. ಅಲ್ಲಿಂದ ಸಂಬಂಧಪಟ್ಟ ಸ್ಥಳೀಯ ಕಂಟ್ರೋಲ್ ರೂಂಗಳಿಗೆ ಸಂಪರ್ಕಿಸಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಾಗುತ್ತದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.
ಈ ಕೋಡ್ ಸಂಖ್ಯೆ ವಲಸೆ ಕಾರ್ಮಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು ದೂರ ಸಂಪರ್ಕ ಇಲಾಖೆಯ ಕೆಲಸವಾಗಿದೆ. ಈ ಕರೆಗೆ ದರ ವಿಧಿಸಲಾಗುತ್ತದೆ. ಇನ್ನು ತುರ್ತು ಸೇವೆಗೆ ದೂರಸಂಪರ್ಕ ಇಲಾಖೆ 1930 ಮತ್ತು 1944 ಸಹಾಯವಾಣಿಯನ್ನು ನೀಡಿದೆ.