ದೇಶ

25 ಗಂಟೆಗಳಲ್ಲಿ ತಲುಪಬೇಕಾದ ರೈಲು ದಾರಿ ತಪ್ಪಿ ನಿಲ್ದಾಣ ಸೇರಿದ್ದು ಎರಡುವರೆ ದಿನದ ನಂತರ! 

Srinivas Rao BV

ನವದೆಹಲಿ: ಮಹಾರಾಷ್ಟ್ರದಿಂದ ಉತ್ತರ ಪ್ರದೇಶದ ಗೋರಖ್ ಪುರಕ್ಕೆ ರೈಲಿನಲ್ಲಿ 25 ಗಂಟೆಗಳ ಪ್ರಯಾಣ, ಆದರೆ ಮಹಾರಾಷ್ಟ್ರದಿಂದ ಕಾರ್ಮಿಕರನ್ನು ಹೊತ್ತು ಸಾಗಿದ್ದ ಶ್ರಮಿಕ್ ವಿಶೇಷ ರೈಲು ತಲುಪಿದ್ದು ಬರೊಬ್ಬರಿ ಎರಡು ದಿನಗಳ ನಂತರ! 

ಈ ಘನಘೋರವಾದ ಪ್ರಯಾಣದ ವಿವರಣೆಯನ್ನು ಅದರಲ್ಲಿ ತೆರಳುತ್ತಿದ್ದ ಕಾರ್ಮಿಕರೇ ವಿವರಿಸಿದ್ದಾರೆ. ನಮ್ಮ ರೈಲು ತಪ್ಪು ಹಾದಿಯಲ್ಲಿ ಸಾಗುತ್ತಿತ್ತು. ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಎಲ್ಲಾ ರೈಲು ನಿಲ್ದಾಣಗಳು ನಮಗೆ ಹೊಸದಾಗಿತ್ತು. ನಾವು ಯಾವುದೋ ಸಾಹಸ ಸಿನಿಮಾದ ಭಾಗವಾಗಿರುವಂತೆ ಭಾಸವಾಗುತ್ತಿತ್ತು ಎನ್ನುತ್ತಾರೆ ಪ್ರಯಾಣಿಕ ವಿಜಯ್ ಕುಮಾರ್, ಮತ್ತೋರ್ವ ಪ್ರಯಾಣಿಕ ಸೂರಜ್ ಗುಪ್ತ ಮಾತನಾಡಿ ಮಹಾರಾಷ್ಟ್ರದಿಂದ ಗೋರಖ್ ಪುರಕ್ಕೆ ಹೊರಟಿದ್ದ ರೈಲು ದಾರಿ ತಪ್ಪಿ ಬೇರೆಡೆಗೆ ಹೋದ ಪರಿಣಾಮ ಪ್ರಯಾಣ ಘನಘೋರವಾಗಿತ್ತು ಎಂದು ವಿವರಿಸುತ್ತಾರೆ. 

ಮಹಾರಾಷ್ಟ್ರದಿಂದ ತೆರಳಿದ್ದ ರೈಲು ಒಡಿಶಾಗೆ ತಲುಪಿದ್ದರ ಪರಿಣಾಮವಾಗಿ ಪ್ರಯಾಣಿಕರಲ್ಲಿ ತಾವು ಊರು ತಲುಪುತ್ತೇವೋ ಇಲ್ಲವೋ ಎಂಬ ಅನುಮಾನ ಮೂಡಿತ್ತು ಎಂದು ಪ್ರಯಾಣಿಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 

ಇದೇ ವೇಳೆ ರೈಲು ಹಾದಿ ತಪ್ಪಿತ್ತು ಎಂಬ ಆರೋಪವನ್ನು ರೈಲ್ವೆ ಇಲಾಖೆ ತಳ್ಳಿ ಹಾಕಿದ್ದು, ಸಾಮಾನ್ಯವಾಗಿ ಸಂಚರಿಸುತ್ತಿದ್ದ ಮಾರ್ಗದಲ್ಲಿ ದಟ್ಟಣೆ ಇದ್ದ ಪರಿಣಾಮ ಉದ್ದೇಶಪೂರ್ವಕವಾಗಿ ರೈಲಿನ ಮಾರ್ಗವನ್ನು ಬದಲಾವಣೆ ಮಾಡಲಾಗಿತ್ತು ಎಂದು ರೈಲ್ವೆ ಸ್ಪಷ್ಟನೆ ನೀಡಿದೆ. ಆದರೆ 25 ಗಂಟೆಗಳಲ್ಲಿ ಮುಗಿಯಬೇಕಾದ ಪ್ರಯಾಣಕ್ಕೆ 60 ಗಂಟೆಗಳು ಕಾದ ಕಾರ್ಮಿಕರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದು ತಿಳಿದುಬಂದಿದೆ.
 

SCROLL FOR NEXT