ದೇಶ

ನಿಜಾಮುದ್ದೀನ್ ಮರ್ಕಜ್: 34 ರಾಷ್ಟ್ರಗಳ 376 ವಿದೇಶಿಗರ ಮೇಲೆ ಚಾರ್ಚ್ ಶೀಟ್ ದಾಖಲಿಸಿದ ಪೊಲೀಸರು

Nagaraja AB

ನವದೆಹಲಿ: ದೇಶಾದ್ಯಂತ ಕೊರೋನಾವೈರಸ್ ಸೋಂಕು ವ್ಯಾಪಿಸುವಲ್ಲಿ ಪ್ರಮುಖ ಕಾರಣವಾಗಿರುವ ರಾಷ್ಟ್ರ ರಾಜಧಾನಿಯ ನಿಜಾಮುದ್ಧೀನ್ ಮರ್ಕಜ್ ನಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ 34 ರಾಷ್ಟ್ರಗಳ 376 ವಿದೇಶಿ ಪ್ರಜೆಗಳ ಮೇಲೆ 35 ವಿವಿಧ ಚಾರ್ಜ್ ಶೀಟ್ ಗಳನ್ನು ದೆಹಲಿ ಪೊಲೀಸರು ನ್ಯಾಯಾಲಯವೊಂದರಲ್ಲಿ  ದಾಖಲಿಸಿದ್ದಾರೆ. 

ಮಂಗಳವಾರ 20 ರಾಷ್ಟ್ರಗಳ 82 ವಿದೇಶಿ ಪ್ರಜೆಗಳ ಮೇಲೆ 20 ಚಾರ್ಜ್ ಶೀಟ್ ದಾಖಲಿಸಿದ್ದ ಪೊಲೀಸರು ಬುಧವಾರ 14 ರಾಷ್ಟ್ರಗಳ 294 ವಿದೇಶಿಗರ ಮೇಲೆ 15 ಜಾರ್ಜ್ ಶೀಟ್ ದಾಖಲಿಸಿದ್ದಾರೆ.

ವೀಸಾ ನಿಯಮ ಉಲ್ಲಂಘನೆ,  ಕೋವಿಡ್-19 ನಿಟ್ಟಿನಲ್ಲಿ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು  ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸೆಕ್ಷನ್ 144ರ ಅಡಿಯಲ್ಲಿನ ನಿಷೇಧ ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ಎಲ್ಲಾ ವಿದೇಶಿ ಪ್ರಜೆಗಳ ಮೇಲೆ ಚಾರ್ಚ್ ಶೀಟ್ ದಾಖಲಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಅಲ್ಲದೇ, ಐಪಿಸಿ ಸೆಕ್ಷನ್ 188 (ಸಾರ್ವಜನಿಕ ಸೇವಕರಿಂದ ಘೋಷಿಸಲ್ಪಟ್ಟ ಆದೇಶಕ್ಕೆ ಅಸಹಕಾರ) 269( ಜೀವಕ್ಕೆ ಅಪಾಯಕಾರಿಯಾದ ಸೋಂಕನ್ನು ಹರಡುವ ಸಾಧ್ಯತೆಯಲ್ಲಿ  ನಿರ್ಲಕ್ಷ್ಯದ ವರ್ತನೆ) 270 (ದುರುದ್ದೇಶಪೂರಿತ ವರ್ತನೆ) ಮತ್ತಿತರ ಸೆಕ್ಷನ್ ಗಳಡಿಯಲ್ಲಿಯೂ ದೂರು ದಾಖಲಿಸಲಾಗಿದೆ. 

ಕೇಂದ್ರಸರ್ಕಾರ ಆ ಪ್ರಜೆಗಳ ವೀಸಾವನ್ನು ರದ್ದುಪಡಿಸಿದ್ದು, ಅವರನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಆದಾಗ್ಯೂ, ವಿದೇಶಿಗರನ್ನು ಈವರೆಗೂ ಬಂಧಿಸಿಲ್ಲ. 

294 ಪ್ರಜೆಗಳು ಮಲೇಷ್ಯಾ, ಥೈಲ್ಯಾಂಡ್, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಮತ್ತು ಆಫ್ರಿಕನ್ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ. ಮಂಗಳವಾರ ಚಾರ್ಜ್ ಶೀಟ್ ದಾಖಲಿಸಿರುವ 82 ವಿದೇಶಿಗರ ಪೈಕಿಯಲ್ಲಿ ನಾಲ್ವರು ಆರೋಪಿಗಳು ಅಪ್ಘಾನಿಸ್ತಾನ, ತಲಾ ಏಳು ಮಂದಿ ಬ್ರಜಿಲ್ ಮತ್ತು ಚೀನಾದವರು, ಐವರು ಅಮೆರಿಕಾ, ಇಬ್ಬರು ಆಸ್ಟ್ರೇಲಿಯಾ, ಕಜಾಕಿಸ್ತಾನ, ಮೊರಕ್ಕೊ, ಇಂಗ್ಲೆಂಡ್ ದೇಶದವರಾಗಿದ್ದಾರೆ. ಉಕ್ರೇನ್, ಈಜಿಪ್ಟ್, ರಷ್ಯಾ, ಜೋರ್ಡನ್, ಟ್ಯೂನಿಷಿಯಾ, ಬೆಲ್ಜಿಯಂ ನಿಂದ ತಲಾ ಒಬ್ಬೊಬ್ಬರು ಬಂದಿದ್ದು, 10 ಸೌದಿ ಅರಬೀಯಾ, 14 ಫಿಜಿ ಮತ್ತು ಆರು ಮಂದಿ ಸುಡಾನ್ ಮತ್ತು ಫಿಲಿಫೈನ್ಸ್ ನವರಾಗಿದ್ದಾರೆ.

ಮಂಗಳವಾರ ದಾಖಲಿಸಿರುವ ಚಾರ್ಜ್ ಶೀಟ್  ಜೂನ್ 12 ರಂದು ಮತ್ತು ಬುಧವಾರ ಸಲ್ಲಿಸಿರುವ ಚಾರ್ಜ್ ಶೀಟ್ ಜೂನ್ 17 ರಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸೈಮಾ ಜಮಿಲ್ ಮುಂದೆ ವಿಚಾರಣೆಗೆ ಬರಲಿದೆ. 

ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನೂರಾರು ತಬ್ಲಿಘಿ ಜಮಾತ್ ಸದಸ್ಯರಲ್ಲಿ ಕೋವಿಡ್ -19 ಸೋಂಕು ದೃಢಪಟ್ಟ ನಂತರ ದೇಶದ ಇತರ ಕಡೆಗಳಲ್ಲಿಯೂ ವ್ಯಾಪಕವಾಗಿ ಹರಡಿದೆ.

SCROLL FOR NEXT