ದೇಶ

ಶ್ರಮಿಕ್ ರೈಲುಗಳಲ್ಲಿ ಕಳೆದ 3 ದಿನಗಳಲ್ಲಿ ಒಂಬತ್ತು ವಲಸೆ ಕಾರ್ಮಿಕರ ಸಾವು

Srinivasamurthy VN

ನವದೆಹಲಿ: ಕೊರೋನಾ ವೈರಸ್ ಲಾಕ್ಡೌನ್ ಹಿನ್ನಲೆಯಲ್ಲಿ ತಮ್ಮ ತವರಿಗೆ ವಾಪಸ್ ತೆರಳಲು  ಬಿಡುಗಡೆ ಮಾಡಿರುವ ವಿಶೇಷ ಶ್ರಮಿಕ್ ರೈಲುಗಳಲ್ಲಿ ಕಳೆದ 3 ದಿನಗಳಿಂದ 9 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಶ್ರಮಿಕ್ ವಿಶೇಷ ರೈಲುಗಳಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ತೆರಳುತ್ತಿದ್ದ ಕನಿಷ್ಠ ಒಂಬತ್ತು ಮಂದಿ ವಲಸೆ ಕಾರ್ಮಿಕರು ಸಾವಿಗೀಡಾಗಿದ್ದಾರೆ. ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ಐದು ಮಂದಿ ಕಾರ್ಮಿಕರು ಮೃತಪಟ್ಟರೆ, ನಾಲ್ಕು ಮಂದಿ  ಬಿಹಾರದವರಾಗಿದ್ದಾರೆ. ಸಾವಿಗೀಡಾದವರಲ್ಲಿ ಹಲವರು ರೋಗಿಗಳಾಗಿದ್ದು ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮರಳುತ್ತಿದ್ದರು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಎದ್ದೇಳು ಅಮ್ಮ ಎನ್ನುತ್ತಿದ್ದ ಪುಟ್ಟ ಮಗು
ಇನ್ನು ಬುಧವಾರ ಪುಟ್ಟ ಮಗುವೊಂದು ತನ್ನ ತಾಯಿ ಸತ್ತಿದ್ದಾಳೆಂದು ತಿಳಿಯದೆ ಆಕೆಯ ಕಳೇಬರಕ್ಕೆ ಹೊದಿಸಲಾಗಿದ್ದ ಚಾದರವನ್ನು ಎಳೆಯುತ್ತಾ ತಾಯಿಯನ್ನು ಎಬ್ಬಿಸಲು ಯತ್ನಿಸುತ್ತಿತ್ತು. ಬಿಹಾರದ ಮುಜಾಫರ್ ಪುರ್ ರೈಲ್ವೆ ನಿಲ್ದಾಣದಲ್ಲಿ ಕಂಡು ಬಂದ ಈ ದೃಶ್ಯವ್ಯಾಪಕ ವೈರಲ್ ಆಗಿತ್ತು.  ಅಲ್ಲದೆ ವಲಸೆ ಕಾರ್ಮಿಕರ ಬವಣೆ ಮೇಲೆ ಮಾಧ್ಯಮಗಳು ಬೆಳಕು ಚೆಲ್ಲಲು ಇದು ನೆರವಾಗಿತ್ತು. ಮಗುವಿನ ತಾಯಿ ಅರ್ವೀನಾ ಖಟೂನ್ (26 ವರ್ಷ) ಕಟಿಹಾರ್ ನಿವಾಸಿಯಾಗಿದ್ದು ಮೇ 23ರಂದು ತನ್ನ ಇಬ್ಬರು ಮಕ್ಕಳೊಂದಿಗೆ ಅಹ್ಮದಾಬಾದ್‍ನಲ್ಲಿ ರೈಲು ಹತ್ತಿದ್ದರು. ಆಕೆಯ ಜತೆ ಆಕೆಯ  ಸೋದರಿ ಹಾಗೂ ಮೈದುನ ಇಬ್ಬರೂ ಇದ್ದರು. ಬಿಹಾರದ ಕಟಿಹಾರ್ ಎಂಬಲ್ಲಿನ ಉರೇಶ್ ಖಟೂನ್ ಎಂಬ ಮಹಿಳೆ ಸೂರತ್-ಪುರ್ಣಿಯಾ ರೈಲಿನಲ್ಲಿ ಮಲಗಿದಲ್ಲಿಯೇ ಸಾವನ್ನಪ್ಪಿದ್ದಳು.  ಆಕೆಗೆ ಆರೋಗ್ಯ ಸಮಸ್ಯೆ ಇಲ್ಲದೇ ಇದ್ದರೂ ರಕ್ತಹೀನತೆಯಿಂದ ಆಕೆ ಬಳಲುತ್ತಿದ್ದಳೆಂದು ಕುಟುಂಬ  ಸದಸ್ಯರು ತಿಳಿಸಿದ್ದಾರೆ.

ಇನ್ನು ಬಿಹಾರದ ದಾನಾಪುರ್ ಎಂಬಲ್ಲಿ  70 ವರ್ಷದ ಬಸಿಷ್ಠ್ ಮಹತೋ ಎಂಬುವವರ ಮೃತದೇಹ ಮುಂಬೈ-ದರ್ಭಾಂಗ್ ಶ್ರಮಿಕ್ ರೈಲಿನಲ್ಲಿ ಪತ್ತೆಯಾಗಿತ್ತು. ಬಳಿಕ ವೈದ್ಯಕೀಯ ತಪಾಸಣೆ ವೇಳೆ ಅವರಿಗೆ ಹೃದ್ರೋಗ ಇತ್ತು ಎಂದು ತಿಳಿದು ಬಂದಿತ್ತು. ಅಂತೆಯೇ ವಾರಣಾಸಿಯ  ಮಂಡುವಡಿಹ್ ನಿಲ್ದಾಣ ತಲುಪಿದ ರೈಲಿನಲ್ಲಿ ಜೌನ್ಪುರ್ ಎಂಬಲ್ಲಿನ ಒಬ್ಬ ವ್ಯಕ್ತಿ ಹಾಗೂ ಆಝಂಘಡ್ ಮೂಲದ ನಿವಾಸಿ ಮೃತಪಟ್ಟಿದ್ದರು. ಅವರಲ್ಲೊಬ್ಬ ಅಂಗವಿಕಲನಾಗಿದ್ದರೆ ಇನ್ನೊಬ್ಬನಿಗೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಿಹಾರದ  ಸರನ್ ಮೂಲದ 58 ವರ್ಷದ ಭೂಷಣ್ ಸಿಂಗ್ ಎಂಬಾತ ಸೂರತ್‍ನ ಬಲ್ಲಿಯಾ ನಿಲ್ದಾಣ ತಲುಪಿದ ರೈಲಿನಲ್ಲಿ ಮೃತಪಟ್ಟಿದ್ದರೆ, ಝಾನ್ಸಿ-ಗೋರಖ್ ಪುರ್ ರೈಲು ಕಾನ್ಪುರ್ ತಲುಪಿದಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದರು.

ಸೋಮವಾರ ದೆಹಲಿಯಿಂದ ಪ್ರಯಾಣಿಸುತ್ತಿದ್ದ ನಾಲ್ಕು ವರ್ಷದ ಮುಹಮ್ಮದ್ ಇರ್ಷಾದ್ ಬಿಸಿಲಿನ ಧಗೆ ಹಾಗೂ ಹಸಿವಿನಿಂದ ಸಾವನ್ನಪ್ಪಿಗದ್ದರೆ, ನೇಪಾಳದ ಜನಕ್ಪುರ್ ಎಂಬಲ್ಲಿಯ ಶೋಭನ್ ಕುಮಾರ್ ಎಂಬ ವ್ಯಕ್ತಿ ಉತ್ತರ ಪ್ರದೇಶದ ಭಲ್ಲಿಯಾ ಪಟ್ಟಣವನ್ನು ಮಡಗಾಂವ್-ದರ್ಬಾಂಘ  ರೈಲಿನಲ್ಲಿ ಮಂಗಳವಾರ ಸಂಜೆ ತಲುಪಿದ ಕೂಡಲೇ ಅಸ್ವಸ್ಥನಾದ ಕಾರಣ ಆಸ್ಪತ್ರೆಗೆ ದಾಖಲಿಸಲ್ಪಟ್ಟರೂ ಬುಧವಾರ ಮೃತಪಟ್ಟಿದ್ದ. ಹೀಗೆ ಸೋಮವಾಪದಿಂದೀಚಿಗೆ ಶ್ರಮಿಕ್ ರೈಲಿನಲ್ಲಿ ಒಟ್ಟು 9 ಮಂದಿ ಮೃತರಾಗಿದ್ದಾರೆ. 

SCROLL FOR NEXT