ದೇಶ

ಶ್ರಮಿಕ್ ರೈಲುಗಳಲ್ಲಿ 80 ವಲಸೆ ಕಾರ್ಮಿಕರ ಸಾವು: ರೈಲ್ವೇ ಇಲಾಖೆ 

Srinivasamurthy VN

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಅತಂತ್ರರಾಗಿದ್ದ ವಲಸೆ ಕಾರ್ಮಿಕರನ್ನು ಅವರವರ ತವರಿಗೆ ತಲುಪಿಸಲು ಕೇಂದ್ರ ಸರ್ಕಾರ ಬಿಟ್ಟಿದ್ದ ಶ್ರಮಿಕ್ ರೈಲಿನಲ್ಲಿ ಈ ವರೆಗೂ 80 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಈ ಬಗ್ಗೆ ರೈಲ್ವೆ ಸುರಕ್ಷಾ ಪಡೆ  ಮಾಹಿತಿ ನೀಡಿದ್ದು, ದೇಶದ ವಿವಿಧೆಡೆ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರು ತವರು ಗ್ರಾಮಗಳಿಗೆ ಮರಳಲು ಅನುಕೂಲ ಕಲ್ಪಿಸುವ ಸಲುವಾಗಿ ಮೇ 9ರಿಂದ ಮೇ 29ರವರೆಗೆ ಶ್ರಮಿಕ್ ರೈಲುಗಳಲ್ಲಿ ಪ್ರಯಾಣದ ವೇಳೆ ಒಟ್ಟು 80 ವಲಸೆ ಕಾರ್ಮಿಕರು  ಮೃತಪಟ್ಟಿದ್ದಾರೆ ಎಂದು ಹೇಳಿದೆ.

ಈ ಶ್ರಮಿಕ್ ರೈಲು ಸೇವೆಯನ್ನು ಮೇ ಒಂದರಿಂದ ಆರಂಭಿಸಲಾಗಿತ್ತು, ಮೇ 27ರವರೆಗೆ ಒಟ್ಟು 3,840 ರೈಲುಗಳು ಸುಮಾರು 50 ಲಕ್ಷ ವಲಸೆ ಕಾರ್ಮಿಕರು ಪ್ರಯಾಣ ಮಾಡಿದ್ದಾರೆ. ಈ ಪೈಕಿ 80 ಮಂದಿ ಪ್ರಯಾಣಿಕರು ವಿವಿಧ ಕಾರಣಗಳಿಂದಾಗಿ ಸಾವನ್ನಪ್ಪಿದ್ದು, ಬುಧವಾರ ಒಂದೇ ದಿನ  ವಿವಿಧ ರಾಜ್ಯಗಳಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಆದರೆ ಮೃತಪಟ್ಟವರ ಪೈಕಿ ಬಹುತೇಕ ಮಂದಿ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

ಇಲಾಖೆ ನೀಡಿರುವ ಮಾಹಿತಿ ಅನ್ವಯ ಮೇ27ರಂದು 10 ಮಂದಿ ಸಾವನ್ನಪ್ಪಿದ್ದರೆ, ಮೇ 24 ಮತ್ತು 25ರಂದು ತಲಾ 9 ಮಂದಿ ಸಾವನ್ನಪ್ಪಿದ್ದಾರೆ, ಮೇ 26ರಂದು 13 ಮಂದಿ ಮತ್ತು ಮೇ 27ರಂದು 8 ಮಂದಿ ಸಾವನ್ನಪ್ಪಿದ್ದಾರೆ.

ರೈಲಿನಲ್ಲಿ ಉಸಿರುಗಟ್ಟಿ, ಉಷ್ಣಾಂಶ ಹಾಗೂ ಹಸಿವಿನಿಂದ ಮೃತಪಟ್ಟಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯೆಯಾಗಿ ಆರ್‌ಪಿಎಫ್ ಈ ಹೇಳಿಕೆ ನೀಡಿದ್ದು, ಹಲವು ಮಂದಿ ವೈದ್ಯಕೀಯ ಚಿಕಿತ್ಸೆಗಾಗಿಯೇ ನಗರಗಳಿಗೆ ಬಂದಿದ್ದವರು ಎಂದೂ ಇಲಾಖೆ ಸಮರ್ಥಿಸಿಕೊಂಡಿದೆ. ಅಂತೆಯೇ ರಾಜ್ಯಗಳ  ಜತೆ ಸಮನ್ವಯದೊಂದಿಗೆ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. 

SCROLL FOR NEXT