ದೇಶ

ಭಾರತ-ಚೀನಾ ಸಂಬಂಧ ತೀವ್ರ ಒತ್ತಡದಲ್ಲಿದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್

Sumana Upadhyaya

ನವದೆಹಲಿ: ಭಾರತ ಮತ್ತು ಚೀನಾ ಮಧ್ಯೆ ಸಂಬಂಧ ತೀವ್ರ ಒತ್ತಡದಲ್ಲಿದ್ದು, ಶಾಂತಿ ಪುನರ್ ಸ್ಥಾಪನೆಗೆ ಎರಡೂ ದೇಶಗಳ ಮಧ್ಯೆ ಕಳೆದ ಕೆಲ ವರ್ಷಗಳಲ್ಲಿ ಮಾಡಿಕೊಂಡಿರುವ ಒಪ್ಪಂದವನ್ನು ಸೂಕ್ಷ್ಮವಾಗಿ ಪರಸ್ಪರ ಗೌರವಿಸಬೇಕು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಅವರು ನಿನ್ನೆ ರಾಷ್ಟ್ರೀಯ ಏಕತೆ ದಿನ ಪ್ರಯುಕ್ತ ಸರ್ದಾರ್ ವಲ್ಲಭಬಾಯಿ ಪಟೇಲ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ-ಚೀನಾ ಗಡಿಭಾಗದಲ್ಲಿ ಗಡಿ ವಾಸ್ತವ ರೇಖೆಯಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸಲು ಯತ್ನಿಸಿದರೆ ಅದನ್ನು ಭಾರತ ಖಂಡಿತಾ ಒಪ್ಪುವುದಿಲ್ಲ ಎಂದರು.

ಆಕಾಶವಾಣಿಯಲ್ಲಿ ಜೈಶಂಕರ್ ಅವರ ಉಪನ್ಯಾಸ ನಿನ್ನೆ ಬಿತ್ತರವಾಗಿದ್ದು, ಅದರಲ್ಲಿ ಗಡಿನಿಯಂತ್ರಣ ರೇಖೆಯಲ್ಲಿ ಭಯೋತ್ಪಾದನೆ ಬಗ್ಗೆ ಕೂಡ ಉಲ್ಲೇಖಿಸಿದ್ದು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಎಂದಿಗೂ ಭಾರತ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಚೀನಾ ವಿಷಯವನ್ನು ತೆಗೆದುಕೊಂಡರೆ ಮೂರು ದಶಕಗಳವರೆಗೆ ಪರಿಸ್ಥಿತಿ ಸ್ಥಿರವಾಗಿತ್ತು, ಎರಡೂ ದೇಶಗಳು ಸಾಂಪ್ರದಾಯಿಕ ಸವಾಲುಗಳು ಮತ್ತು ಹೊಸ ಪರಿಸ್ಥಿತಿಗಳನ್ನು ಎದುರಿಸುತ್ತಿದೆ ಎಂದರು.

ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ವಿಸ್ತೃತ ಸಹಕಾರಕ್ಕೆ ಆಧಾರವಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗವು ಕಾಣಿಸಿಕೊಂಡು ಅದು ಇಡೀ ವಿಶ್ವಕ್ಕೆ ಪಸರಿಸುತ್ತಿದ್ದಂತೆ ಸಂಬಂಧವು ತೀವ್ರ ಒತ್ತಡಕ್ಕೆ ಒಳಗಾಗಿದೆ ಎಂದು ಸಚಿವರು ಹೇಳಿದರು.
ಪೂರ್ವ ಲಡಾಕ್ ನಲ್ಲಿ ಭಾರತ ಮತ್ತು ಚೀನಾ ದೇಶಗಳ ಸೇನೆಗಳು ಸಂಘರ್ಷದಲ್ಲಿ ನಿರತವಾಗಿದ್ದು ಎರಡೂ ಕಡೆಯ ಸೈನಿಕರು ಸಾವು ನೋವು ಕಂಡಿದ್ದಾರೆ. ನಂತರ ಹಲವು ಸುತ್ತಿನ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳು ನಡೆದರೂ ಸಹ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

SCROLL FOR NEXT