ದೇಶ

'ನನ್ನ ಬಂಧನ ಅಕ್ರಮ, ಎಫ್ಐಆರ್ ರದ್ದುಗೊಳಿಸಿ': ಮುಂಬೈ ಹೈಕೋರ್ಟ್ ಗೆ ಅರ್ನಬ್ ಗೋಸ್ವಾಮಿ ಮೊರೆ

Sumana Upadhyaya

ಮುಂಬೈ: ತಮ್ಮನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದಾರೆ. ಮಹಾರಾಷ್ಟ್ರದ ಅಲಿಬೌಗ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸಬೇಕೆಂದು ಕೂಡ ಅವರು ಈ ಸಂದರ್ಭದಲ್ಲಿ ಕೋರಿದ್ದಾರೆ.

ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎಂಎಸ್ ಕಾರ್ಣಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠ ಇಂದು ಅಪರಾಹ್ನ ಅರ್ನಬ್ ಅವರ ಅರ್ಜಿ ವಿಚಾರಣೆ ನಡೆಸಲಿದೆ. 

ಮುಂಬೈಯ ಲೋವರ್ ಪರೇಲ್ ನಲ್ಲಿರುವ ಅರ್ನಬ್ ಗೋಸ್ವಾಮಿ ನಿವಾಸದಲ್ಲಿ ನಿನ್ನೆ ಬೆಳಗ್ಗೆ ಪೊಲೀಸರು ಅವರನ್ನು ಬಂಧಿಸಿದ್ದರು. 2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ಅವರ ತಾಯಿಯ ಆತ್ಮಹತ್ಯೆಗೆ ಅರ್ನಬ್ ಗೋಸ್ವಾಮಿ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಅರ್ನಬ್ ಅವರನ್ನು ಬಂಧಿಸಿ ಪಕ್ಕದ ರಾಯ್ ಗಾಡ್ ಜಿಲ್ಲೆಯ ಅಲಿಬೌಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. 

ನಂತರ ಅವರನ್ನು ಅಲಿಬೌಗ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು, ಕೋರ್ಟ್ ಅವರಿಗೆ ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನವಿಧಿಸಿದೆ. ಅಲಿಬೌಗ್ ಜೈಲಿನ ಕೈದಿಗಳಿಗೆ ಕೋವಿಡ್-19 ಕೇಂದ್ರವಾಗಿ ಮೀಸಲಿಟ್ಟಿರುವ ಸ್ಥಳೀಯ ಶಾಲೆಯೊಂದರಲ್ಲಿ ಸದ್ಯ ಅರ್ನಬ್ ಗೋಸ್ವಾಮಿಯವರನ್ನು ಇರಿಸಲಾಗಿದೆ. 

ಗೋಸ್ವಾಮಿ ಪರ ವಕೀಲರು ಇಂದು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ, ಗೋಸ್ವಾಮಿ ಬಂಧನ ಅಕ್ರಮವಾಗಿದ್ದು ಕೇಸಿಗೆ ಸಂಬಂಧಿಸಿದಂತೆ ವಿಚಾರಣೆಗೆ ತುರ್ತು ತಡೆ ನೀಡಬೇಕು ಮತ್ತು ತಮ್ಮ ಕಕ್ಷಿದಾರರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ. ಅಲ್ಲದೆ ಅರ್ನಬ್ ವಿರುದ್ಧ ದಾಖಲಿಸಿರುವ ಎಫ್ಐಆರ್ ನ್ನು ರದ್ದುಗೊಳಿಸಬೇಕೆಂದು ಕೂಡ ಕೋರಿದ್ದಾರೆ. 

SCROLL FOR NEXT