ದೇಶ

ಶೋಪಿಯಾನ್‌ ಜಿಲ್ಲೆಯಲ್ಲಿ ಎನ್ಕೌಂಟರ್: ಇಬ್ಬರು ಉಗ್ರರ ಹೊಡೆದುರುಳಿಸಿದ ಸೇನಾಪಡೆ, ಇಂಟರ್ನೆಟ್ ಸೇವೆ ಸ್ಥಗಿತ

Manjula VN

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಮಂಗಳವಾರ ತಿಳಿದುಬಂದಿದೆ. 

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕುಟ್ಪೊರಾ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ನ ವಿಶೇಷ ಕಾರ್ಯಾಚರಣೆ ತಂಡ, ಸಿಆರ್‌ಪಿಎಫ್ ಮತ್ತು ರಾಷ್ಟ್ರೀಯ ರೈಫಲ್ಸ್ ಜಂಟಿಯಾಗಿ ಮುಂಜಾನೆ ಶೋಪಿಯಾನ್‌ನ ಕುಟ್ಪೊರಾ ಗ್ರಾಮದಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದವು. 

ಶೋಧ ಕಾರ್ಯಾಚರಣೆ ವೇಳೆ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿಗಳು ಆರಂಭವಾಗಿದ್ದವು. ಮುಂಜಾಗ್ರತಾ ಕ್ರಮವಾಗಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. 

ಬಳಿಕ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ ಸೇನಾಪಡೆ ಇದೀಗ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ಸ್ಥಳದಲ್ಲಿ ಇನ್ನೂ ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ. 

SCROLL FOR NEXT