ದೇಶ

ಬಿಹಾರ ವಿಧಾನಸಭೆ ಚುನಾವಣೆ: 15ನೇ ಸುತ್ತಿನ ಮತಎಣಿಕೆಯ ಬಳಿಕವೂ ಮುನ್ನಡೆ ಕಾಯ್ದುಕೊಂಡ ಎನ್ ಡಿಎ ಮೈತ್ರಿಕೂಟ

Srinivasamurthy VN

ಪಾಟ್ನಾ: ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭಾ ಚುನಾವಣೆ 2020ರಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಇದೀಗ ಭರ್ಜರಿ ಮುನ್ನಡೆ ಸಾಧಿಸಿದ್ದು, 15ನೇ ಸುತ್ತಿನ ಮತಎಣಿಕೆಯ ಬಳಿಕವೂ 128 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಮತ್ತು ಆರ್‌ಜೆಡಿಯ ಯುವ ನೇತಾರ ತೇಜಸ್ವಿ ಯಾದವ್ ನಡುವೆ ಜಿದ್ದಾಜಿದ್ದಿ ಪೈಪೋಟಿಯಿಂದಾಗಿಯೇ ಸುದ್ದಿಗೆ ಗ್ರಾಸವಾಗಿದ್ದ ಈ ಚುನವಾಣೆಯಲ್ಲಿ ಇದೀಗ ಜೆಡಿಯು ನೇತೃತ್ವದ ಎನ್ ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಇತ್ತೀಚಿನ ವರದಿಗಳು ಬಂದಾಗ ಮುಖ್ಯಮಂತ್ರಿ  ನಿತೀಶ್ ಕುಮಾರ್ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಎನ್‌ಡಿಎ ಮೈತ್ರಿಕೂಟ 128 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದೆ. ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ 100 ಕ್ಷೇತ್ರಗಳಲ್ಲಿ ಮತ್ತು ಎಲ್‌ಜೆಪಿ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 10 ಕ್ಷೇತ್ರಗಳಲ್ಲಿ ಮುಂದಿದ್ದಾರೆ.

ಬಿಹಾರದ 38 ಜಿಲ್ಲೆಗಳ 55 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಈ ವರೆಗೂ 15 ಸುತ್ತಿನ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಆರಂಭದಲ್ಲಿ ಸಾಧಿಸಿದ್ದ ಮುನ್ನಡೆ ಕಾಪಾಡಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದ್ದು, ಸ್ಪರ್ಧಿಸಿದ್ದ 70 ಕ್ಷೇತ್ರಗಳ ಪೈಕಿ ಕೇವಲ 20 ಕ್ಷೇತ್ರಗಳಲ್ಲಿ ಮಾತ್ರ  ಕಾಂಗ್ರೆಸ್ ಮುನ್ನಡೆಯಲ್ಲಿದೆ. ಆದರೆ ಮಹಾಘಟ್ ಬಂಧನ್ ಜೊತೆ 'ಕೈ' ಜೋಡಿಸಿದ್ದ ಎಡಪಕ್ಷಗಳು ನಿರೀಕ್ಷೆಗೂ ಮೀರಿದ ಸಾಧನೆ ತೋರಿದ್ದು, ಸ್ಪರ್ಧಿಸಿದ್ದ 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಘಟ್ ಬಂಧನ್ ನೇತೃತ್ವ ವಹಿಸಿಕೊಂಡಿರುವ ಆರ್‌ಜೆಡಿ ಕೇವಲ 65 ಕ್ಷೇತ್ರಗಳಲ್ಲಿ ಮುನ್ನಡೆ  ಕಾಯ್ದುಕೊಂಡಿದೆ. 

ಶತ್ರುಘ್ನ ಸಿನ್ಹಾ ಮಗ, ಕಾಂಗ್ರೆಸ್‌ನ ಲವ್‌ ಸಿನ್ಹಾ ಮುನ್ನಡೆ
ಬಂಕಿಪುರ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಶತ್ರುಘ್ನಸಿನ್ಹಾ ಅವರ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಲವ್‌ ಸಿನ್ಹಾ, ಬಿಜೆಪಿಯ ನಿತಿನ್ ನಬಿನ್ ಅವರ ವಿರುದ್ಧ 1,200 ಮತಗಳ ಮುನ್ನಡೆ ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಪ್ಲೂರಲ್ಸ್‌ ಪಾರ್ಟಿಯ ಮುಖ್ಯಸ್ಥೆ ಪುಷ್ಪಂ ಪ್ರಿಯಾ ಚೌಧರಿ 121 ಮತಗಳನ್ನು ಪಡೆದಿದ್ದಾರೆ.  ಮೊದಲ ಬಾರಿಗೆ ಚುನಾವಣೆಯ ಕಣಕ್ಕಿಳಿಯುತ್ತಿರುವ ನೀವು, ಬಿಹಾರದಲ್ಲಿ ಆರ್‌ಜೆಡಿ ಪ್ರಬಲ ಪಕ್ಷವಾಗಿದ್ದರೂ, ಕಾಂಗ್ರೆಸ್‌ ಪಕ್ಷವನ್ನೇ  ಏಕೆ ಆಯ್ಕೆ ಮಾಡಿಕೊಂಡಿರಿ ಎಂಬ ಪ್ರಶ್ನೆಗೆ ಉತ್ತರಿಸಿದ 37ರ ಹರೆಯದ ಲವ್‌ ಸಿನ್ಹಾ, ‘ನಾನು ಕಾಂಗ್ರೆಸ್‌ ಆಯ್ಕೆ ಮಾಡಿಕೊಂಡಿಕೊಡಿಲ್ಲ, ಆ ಪಕ್ಷವೇ ನನ್ನನ್ನು ಆಯ್ಕೆ  ಮಾಡಿಕೊಂಡಿದೆ‘ ಎಂದು ಹೇಳಿದ್ದಾರೆ.

SCROLL FOR NEXT