ದೇಶ

ಬಿಹಾರ ಚುನಾವಣೆ: 'ತೇಜಶ್ವಿ ಯಾದವ್' ಮ್ಯಾನ್ ಆಫ್ ದಿ ಮ್ಯಾಚ್ ಎಂದ ಸಂಜಯ್ ರೌತ್

Lingaraj Badiger

ಮುಂಬೈ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ತೇಜಶ್ವಿ ಯಾದವ್ ಅವರು "ಮ್ಯಾನ್ ಆಫ್ ದಿ ಮ್ಯಾಚ್" ಆಗಿ ಹೊರಹೊಮ್ಮಿದ್ದಾರೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ "ಪ್ರಮುಖ ಪಾತ್ರ" ವಹಿಸಲಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್ ರೌತ್ ಅವರು ಬುಧವಾರ ಆರ್ ಜೆಡಿ ನಾಯಕನನ್ನು ಶ್ಲಾಘಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರೌತ್, ಬಿಹಾರದಲ್ಲಿ ಮುಂದಿನ ಎನ್‌ಡಿಎ ಸರ್ಕಾರದ ಸ್ಥಿರತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

"ಎನ್ ಡಿಎಗೆ ಬಹುಮತ ಅತ್ಯಂತ ಕಡಿಮೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷ- ಜೆಡಿಯು ಮೂರನೇ ಸ್ಥಾನದಲ್ಲಿದೆ ಮತ್ತು ಈ ಗೆಲುವನ್ನು ಸಂಭ್ರಮಿಸುವುದು ತಮಾಷೆಯಾಗಿದೆ. ಬಿಜೆಪಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಆದರೆ ಅದಕ್ಕಾಗಿ ಅವರು ಬಹಳಷ್ಟು ರಾಜಕೀಯ ಕಾರ್ಯತಂತ್ರ ರೂಪಿಸಿದ್ದರು" ಶಿವಸೇನಾ ನಾಯಕ ಹೇಳಿದ್ದಾರೆ.

"ಹೊಸ ಸರ್ಕಾರದ ಸ್ಥಿರತೆಗಾಗಿ ಯಾರೂ ಭರವಸೆ ನೀಡಲಾರರು. ಬಿಜೆಪಿ ನಿತೀಶ್ ಕುಮಾರ್ ಅವರ ರೆಕ್ಕೆಗಳನ್ನು ಕತ್ತರಿಸಲು ಬಯಸಿತ್ತು ಮತ್ತು ಇದಕ್ಕಾಗಿ ಚಿರಾಗ್ ಪಾಸ್ವಾನ್ ಅವರನ್ನು ಬಳಸಿಕೊಂಡಿದೆ" ಎಂದು ಆರೋಪಿಸಿದ್ದಾರೆ.

ತೇಜಶ್ವಿ ಯಾದವ್ ಅವರು ಮುಖ್ಯಮಂತ್ರಿಯಾಗಲು ಸಾಧ್ಯವಾಗದಿದ್ದರೂ, ಅವರು ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಹೊರಹೊಮ್ಮಿದ್ದಾರೆ ಎಂದು ರೌತ್ ಹೇಳಿದ್ದಾರೆ.

SCROLL FOR NEXT