ದೇಶ

ಬಿಹಾರ ವಿಧಾನಸಭೆ ಚುನಾವಣೆ: ವಲಸೆ ಕಾರ್ಮಿಕರ ಕೋಪವೇ ನಿತೀಶ್ ಕುಮಾರ್ ಹಿನ್ನಡೆಗೆ ಕಾರಣ!

Srinivasamurthy VN

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಆಡಳಿತಾ ರೂಢ ಜೆಡಿಯು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ನಿತೀಶ್ ಕುಮಾರ್ ನೇತೃತ್ವದ ಈ ಹಿನ್ನಡೆಗೆ ಬಿಹಾರದ ವಲಸೆ ಕಾರ್ಮಿಕರ ಕೋಪವೇ ಕಾರಣ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಕೊರೋನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲ ರಾಜ್ಯ ಸರ್ಕಾರಗಳೂ ವಿವಿಧ ರಾಜ್ಯಗಳಲ್ಲಿರುವ ತಮ್ಮ ರಾಜ್ಯದ ನಾಗಿರಕರನ್ನು ತವರಿಗೆ ಕರೆಸಿಕೊಳ್ಳಲು ಕ್ರಮ ಕೈಗೊಂಡಿದ್ದವು. ಆದರೆ ಈ ವಿಚಾರದಲ್ಲಿ ಬಿಹಾರದ ನಿತೀಶ್ ಕುಮಾರ್ ಸರ್ಕಾರ ಕೊಂಚ ನಿರ್ಲಕ್ಷ್ಯ ತೋರಿತ್ತು ಎನ್ನಲಾಗಿದೆ. ದೇಶದಲ್ಲಿ  ಅತೀ ಹೆಚ್ಚಿನ ಪ್ರಮಾಣದಲ್ಲಿ ವಲಸೆ ಕಾರ್ಮಿಕರು ಇರುವುದು ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ. ಆದರೆ ಕಳೆದ ಕೊರೋನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ನಿತೀಶ್ ಸರ್ಕಾರ ವಲಸೆ ಕಾರ್ಮಿಕರನ್ನು ನಿಭಾಯಿಸುವುದರಲ್ಲಿ ಎಡವಿತ್ತು ಎನ್ನಲಾಗಿದೆ.

ಈ ಕುರಿತು ಸಾಕಷ್ಟು ವಾಹಿನಿಗಳು ವಿಶೇಷ ಸುದ್ದಿಗಳನ್ನು ಪ್ರಸಾರ ಮಾಡಿದ್ದವು. ಈ ವೇಳೆ ಕೊರೊನಾವೈರಸ್ ಸಂಕಷ್ಟದಲ್ಲಿ ಬಳಲಿದ ವಲಸೆ ಕಾರ್ಮಿಕರು ತಮ್ಮ ನೋವನ್ನು ಆಲಿಸುವುದರಲ್ಲಿ ಆಡಳಿತಾರೂಢ ಬಿಜೆಪಿ-ಜೆಡಿಯು ಸರ್ಕಾರ ವಿಫಲವಾಗಿದೆ ಎಂದು ಅಳಲು ತೋಡಿಕೊಂಡಿದ್ದರು. ಚುನಾವಣಾ ಪೂರ್ವ ಸಮೀಕ್ಷೆಯಲ್ಲೂ ನಿರುದ್ಯೋಗ ಚುನಾವಣಾ ಮುಖ್ಯ ವಿಷಯ ಎಂದು ಶೇ.20 ರಷ್ಟು ಮಂದಿ ಹೇಳಿದ್ದರೆ, ಎಕ್ಸಿಟ್ ಪೋಲ್ ನಲ್ಲಿ ಈ ಪ್ರಮಾಣ ಶೇ.30 ಕ್ಕೇರಿತ್ತು. 

ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ತಮ್ಮ ಮನೆಗಳನ್ನು ಸೇರಲು ವಲಸೆ ಕಾರ್ಮಿಕರು ಸಾಕಷ್ಟು ಸಂಕಷ್ಟ ಪಟ್ಟರು. ಈ ಪ್ರಕ್ರಿಯೆಯಲ್ಲಿ ಹಸಿವಿನಿಂದ ಸೂಕ್ತ ಆರೋಗ್ಯ ಚಿಕಿತ್ಸೆ ಇಲ್ಲದೆ ಸಾಕಷ್ಟು ಕಾರ್ಮಿಕರ ಮಕ್ಕಳು ಮತ್ತು ಪೋಷಕರು ಕೊನೆಯುಸಿರೆಳಿದ್ದದರು. ಈ ಎಲ್ಲ ಕೋಪವನ್ನೂ ವಲಸೆ ಕಾರ್ಮಿಕರು ಹಾಲಿ  ಚುನಾವಣೆಯಲ್ಲಿ ನಿತೀಶ್ ಕುಮಾರ್ ವಿರುದ್ಧವಾಗಿ ಮತ ಚಲಾಯಿಸುವ ಮೂಲಕ ತೀರಿಸಿಕೊಂಡಿದ್ದಾರೆ ಎಂಬ ವಾದ ಕೇಳಿಬರುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ರಾಜಕೀಯ ತಜ್ಞರು ವಲಸೆ ಕಾರ್ಮಿಕರ ಕುರಿತಂತೆ ನಿತೀಶ್ ಕುಮಾರ್ ಅವರಿಗೆ ಇದ್ದ ನಿರ್ಲಕ್ಷ್ಯವೇ ಅವರು ಸಾಕಷ್ಟು ಕ್ಷೇತ್ರಗಳನ್ನು ಕಳೆದುಕೊಳ್ಳುವಂತೆ ಮಾಡಿತು ಎಂದು ಹೇಳಿದ್ದಾರೆ. ಪ್ರಮುಖವಾಗಿ ವಲಸೆ ಕಾರ್ಮಿಕರೇ ನಿರ್ಣಾಯಕ ಪಾತ್ರ ವಹಿಸುವ ಶಾಹ್ಬಾದ್ ಮತ್ತು ಭೋಜ್ ಪುರ್  ಕ್ಷೇತ್ರಗಳು ಇದೀಗ ನಿತೀಶ್ ರ ಜೆಡಿಯು ಕೈ ತಪ್ಪಿದೆ. ಈ ಬಗ್ಗೆ ಮಾತನಾಡಿರುವ ರಾಜಕೀಯ ತಜ್ಞ ಲಾ ಕುಮಾರ್ ಮಿಶ್ರಾ ಅವರು, ವಲಸೆ ಕಾರ್ಮಿಕರನ್ನು ನಿತೀಶ್ ಸರ್ಕಾರ ನಿಭಾಯಿಸಿದ ರೀತಿಯನ್ನು ಕಾರ್ಮಿಕರು ಖಂಡಿತವಾಗಿಯೂ ಮರೆತಿಲ್ಲ. ಅದು ಚುನಾವಣೆಯಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಕೇವಲ  ಜೆಡಿಯು ಮಾತ್ರವಲ್ಲದೇ ಎನ್ ಡಿಎ ಮೈತ್ರಿಕೂಟ ಕೂಡ ವಲಸೆ ಕಾರ್ಮಿಕರು ಹೆಚ್ಚಾಗಿರುವ ಬಕ್ಸಾರ್, ರೋಹ್ತಾಸ್, ಜಹಾನಾಬಾದ್, ರಾಮಗಢ, ಮೋಹಾನಿಯಾ ಮತ್ತು ಗಯಾ,ಔರಂಗಾಬಾದ್, ಶೇಖ್‌ಪುರ ಮತ್ತು ಮುಜಾಫರ್ಪುರ ಸೇರಿದಂತೆ ಇತರ ಗಡಿ ಜಿಲ್ಲೆಗಳಲ್ಲಿಯೂ ಎನ್ ಡಿಎ ಮೈತ್ರಿಕೂಟ ವಿಫಲವಾಗಿದೆ.

ಮುಜಫರ್ಪುರದಂತಹ ಕೆಲವು ಹಿಂದುಳಿದ ಜಿಲ್ಲೆಗಳಲ್ಲಿಯೂ ಕೂಡ ವಲಸಿಗರ ವಿಷಯದಲ್ಲಿ ಸರ್ಕಾರ ವಿಫಲವಾಗಿರುವುದು ಮೈತ್ರಿಕೂಟಕ್ಕೆ ಹಿನ್ನಡೆಯಾಗುವಂತೆ ಮಾಡಿದೆ. ಇಡೀ ಚುನಾವಣೆಯಲ್ಲಿ ವಲಸೆ ಕಾರ್ಮಿಕರ ಸಮಸ್ಯೆಗಳೇ ಪ್ರಮುಖ ಮತ್ತು ಪ್ರಧಾನ ಅಂಶವಾಗಿತ್ತು. ಇದನ್ನೇ ವಿಪಕ್ಷಗಳು ಸಕಾರಾತ್ಮಕವಾಗಿ  ಬಳಸಿಕೊಂಡರು. ಅದರ ಫಲಿತಾಂಶವನ್ನು ಇದೀಗ ನಾವು ನೋಡುತ್ತಿದ್ದೇವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

SCROLL FOR NEXT