ದೇಶ

ಉತ್ತರ ಪ್ರದೇಶ: ರೈಲ್ವೆ ಹಳಿ ಮೇಲೆ ಪತ್ರಕರ್ತನ ಶವ ಪತ್ತೆ, ಮಹಿಳಾ ಪೊಲೀಸ್ ಅಧಿಕಾರಿ ವಿರುದ್ಧ ಎಫ್‌ಐಆರ್ ದಾಖಲು

Lingaraj Badiger

ಉನ್ನಾವೊ: ಉತ್ತರ ಪ್ರದೇಶದ ಉನ್ನಾವೊದಲ್ಲಿ ರೈಲು ಹಳಿಯ ಮೇಲೆ ಸ್ಥಳೀಯ ಹಿಂದಿ ದಿನಪತ್ರಿಕೆಗಾಗಿ ಕೆಲಸ ಮಾಡುತ್ತಿದ್ದ 22 ವರ್ಷದ ಪತ್ರಕರ್ತ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಘಟನೆಯ ಹಿಂದೆ ಸಬ್ ಇನ್ಸ್‌ಪೆಕ್ಟರ್ ಸುನೀತಾ ಚೌರಾಸಿಯಾ ಅವರ ಕೈವಾಡ ಇದೆ ಪತ್ರಕರ್ತನ ಕುಟುಂಬ ಆರೋಪಿಸಿದ ನಂತರ ಪೊಲೀಸರು, ಸಬ್ ಇನ್ಸ್‌ಪೆಕ್ಟರ್ ಸುನೀತಾ ಹಾಗೂ ಕಾನ್‌ಸ್ಟೆಬಲ್ ಅಮರ್ ಸಿಂಗ್ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸರ್ಕಲ್ ಅಧಿಕಾರಿ(ನಗರ) ಗೌರವ್ ತ್ರಿಪಾಠಿ ಅವರು ಹೇಳಿದ್ದಾರೆ.

ಪತ್ರಕರ್ತ ಸೂರಜ್ ಪಾಂಡೆ ಅವರನ್ನು ಗುರುವಾರ ಸಂಜೆ ಕೊಲೆ ಮಾಡಿ, ಸದರ್ ಕೊಟ್ವಾಲಿ ಪ್ರದೇಶದ ರೈಲ್ವೆ ಹಳಿ ಮೇಲೆ ಶವವನ್ನು ಎಸೆಯಲಾಗಿದೆ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಸೂರಜ್ ಮತ್ತು ಪೊಲೀಸ್ ಅಧಿಕಾರಿ ಸುನೀತಾ ಇಬ್ಬರು ಸ್ನೇಹಿತರಾಗಿದ್ದರು ಮತ್ತು ಈ ಕಾರಣದಿಂದಾಗಿ ನವೆಂಬರ್ 11 ರಂದು ಕಾನ್‌ಸ್ಟೆಬಲ್ ಅಮರ್ ಸಿಂಗ್ ಅವರು ಫೋನ್ ಕರೆ ಮಾಡಿ ಬೆದರಿಕೆ ಹಾಕಿದ್ದರು ಎಂದು ಪತ್ರಕರ್ತನ ತಾಯಿ ಲಕ್ಷ್ಮಿ ಪಾಂಡೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ ಸೂರಜ್, ಫೋನ್ ಕರೆಯೊಂದು ಬಂದ ನಂತರ ಮನೆಯಿಂದ ತೆರಳಿದ್ದರು. ಬಳಿಕ ರೈಲ್ವೆ ಹಳಿ ಮೇಲೆ ಆತನ ಶವ ಪತ್ತೆಯಾಗಿದೆ ಎಂದು ಲಕ್ಷ್ಮಿ ಹೇಳಿದ್ದಾರೆ.

SCROLL FOR NEXT