ದೇಶ

ಪ್ರಧಾನಿ ಮೋದಿ ನಾಳೆ ಸೈನಿಕರೊಂದಿಗೆ ದೀಪಾವಳಿ ಆಚರಣೆ ಸಾಧ್ಯತೆ

Nagaraja AB

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಾಳೆ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಾಧ್ಯತೆಯಿದೆ. ಅವರು 2014ರಲ್ಲಿ  ಅಧಿಕಾರಕ್ಕೆ ಬಂದಾಗಿನಿಂದಲೂ ಈ ಸಂಪ್ರದಾಯವನ್ನು ಪ್ರತಿವರ್ಷ ಪಾಲಿಸಿಕೊಂಡು ಬಂದಿದ್ದಾರೆ.

ಪ್ರಧಾನಿ ಗುಜರಾತ್ ನಲ್ಲಿ ಇರಲಿದ್ದಾರೆ ಎಂದು ಕೆಲವು ವರದಿಗಳು ಹೇಳಿದರೆ, ಮತ್ತೆ ಕೆಲವು ವರದಿಗಳು, ರಾಜಸ್ಥಾನದ ಜೈಸಾಲ್ಮರ್ ಗೆ ತೆರಳಲಿದ್ದಾರೆ ಎಂದು ಮತ್ತೆ ತಿಳಿಸಿವೆ. ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪ್ರಧಾನಿ ಜೊತೆಗೆ ಇರುವ ಸಾಧ್ಯತೆಯಿದೆ.

ನಿಯಂತ್ರಣ ರೇಖೆಯಲ್ಲಿ ದೇಶ ಕಾಯುತ್ತಿರುವ ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಕಳೆದ ವರ್ಷ ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು. 2018ರಲ್ಲಿ ಉತ್ತರ್ ಖಂಡ್ ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, 2017ರಲ್ಲಿ ಉತ್ತರ ಕಾಶ್ಮೀರದ ಗುರೆಜ್ ವಲಯದಲ್ಲಿನ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದರು. 

ಮೋದಿ ಪ್ರಧಾನಿಯಾದ ನಂತರ ಮೊದಲ ದೀಪಾವಳಿಯನ್ನು ವಿಶ್ವದ ಅತ್ಯುನ್ನತ ಯುದ್ಧಭೂಮಿ ಸಿಯಾಚಿನ್ ನಲ್ಲಿ ಸೈನಿಕರೊಂದಿಗೆ ಕಳೆದಿದ್ದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ರೀತಿಯಲ್ಲಿ ಅವರು  ದೀಪಾವಳಿಯನ್ನು ಆಚರಿಸುತ್ತಿದ್ದ ಬಗ್ಗೆ ವರದಿಯಾಗಿದೆ.

SCROLL FOR NEXT