ದೇಶ

10 ವರ್ಷದಲ್ಲಿ 50 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಸಿಬಿಐನಿಂದ ಕಿರಿಯ ಎಂಜಿನಿಯರ್‌ ಬಂಧನ

Srinivasamurthy VN

ಲಖನೌ: 10 ವರ್ಷದಲ್ಲಿ 50 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇರೆಗೆ ದೌರ್ಜನ್ಯ; ಕಿರಿಯ ಎಂಜಿನಿಯರ್‌ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಚಿತ್ರಕೂಟ, ಹಮಿರ್‌ಪುರ್ ಹಾಗೂ ಬಾಂದಾ ಜಿಲ್ಲೆಗಳಲ್ಲಿ 5 ವರ್ಷದಿಂದ 16 ವರ್ಷ ವಯಸ್ಸಿನ ಸುಮಾರು 50 ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸಿರುವುದಾಗಿ ಆರೋಪಿಸಲಾಗಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆಸಿರುವುದನ್ನು ವಿಡಿಯೊ ಮಾಡಿ, ಫೋಟೊಗಳನ್ನು ತೆಗೆದು ಅವುಗಳನ್ನು ಡಾರ್ಕ್ ವೆಬ್‌  ಮೂಲಕ ಜಗತ್ತಿನಾದ್ಯಂತ ಮಾರಾಟ ಮಾಡಿದ್ದಾರೆಂದು ಸಿಬಿಐ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಸಿಬಿಐನ ಪ್ರಾಥಮಿಕ ವಿಚಾರಣೆಯಲ್ಲಿ ಕಿರಿಯ ಎಂಜಿನಿಯರ್‌ ತನ್ನ ಚಟುವಟಿಕೆಗಳ ಕುರಿತು ವಿವರ ನೀಡಿರುವುದು ತಿಳಿದು ಬಂದಿದ್ದು, ಬಾಂದಾ, ಹಮಿರ್‌ಪುರ್‌ ಹಾಗೂ ಚಿತ್ರಕೂಟ ಜಿಲ್ಲೆಗಳಲ್ಲಿ ಬಡತನದಲ್ಲಿರುವ ಮಕ್ಕಳನ್ನು ಬಳಸಿಕೊಂಡು ಗುಟ್ಟಾಗಿ ಕಾರ್ಯಾಚರಿಸಿರುವುದಾಗಿ ಹೇಳಿದ್ದಾರೆ. ಆನ್ ಲೈನಲ್ಲಿ ಮಕ್ಕಳ  ಮೇಲಿನ ಲೈಂಗಿನ ದೌರ್ಜನ್ಯದ ವಿಡಿಯೊ, ಫೋಟೊ ಕಂಟೆಂಟ್‌ಗಳ ಬಗ್ಗೆ ನಿಗಾವಹಿಸಿರುವ ಸಿಬಿಐನ ವಿಶೇಷ ಘಟಕವು, ಕಿರಿಯ ಎಂಜಿನಿಯರ್‌ನ ಮೇಲೆ ಹಲವು ದಿನಗಳ ಕಾಲ ನಿಗಾ ಇರಿಸಿ ಆತನ ಚಟುವಟಿಕೆಗಳನ್ನು ಬಹಿರಂಗ ಪಡಿಸಿದೆ. ಮಕ್ಕಳು ಈ ವಿಚಾರ ಬಹಿರಂಗ ಪಡಿಸದಂತೆ ಮಕ್ಕಳಿಗೆ ಹಣ, ಉಡುಗೊರೆ,  ಮೊಬೈಲ್ ಫೋನ್ ನಂತಹ ಗ್ಯಾಜೆಟ್ ಗಳನ್ನು ಖರೀಸಿ ನೀಡುತ್ತಿದ್ದ ಎನ್ನಲಾಗಿದೆ. 

ಇದೀಗ ಈತನ ಪುರಾಣ ಬಹಿರಂಗವಾಗಿದ್ದು, ಚಿತ್ರಕೂಟ ನಿವಾಸಿಯಾಗಿರುವ ಕಿರಿಯ ಎಂಜಿನಿಯರ್‌ನನ್ನು ಬಾಂದಾದಲ್ಲಿ ಸಿಬಿಐ ತಂಡ ಬಂಧಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಿಬಿಐನ ವಕ್ತಾರ ಆರ್‌.ಕೆ.ಗೌರ್‌ ಅವರು, 'ಆತ ಡಾರ್ಕ್ ವೆಬ್‌ ಬಳಸಿಕೊಂಡು ಮಕ್ಕಳ ಲೈಂಗಿನ ದೌರ್ಜನ್ಯದ ಹಲವು ವಿಡಿಯೊಗಳನ್ನು  ಭಾರತದಲ್ಲಿ ಹಾಗೂ ವಿದೇಶಗಳಿಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಆತನ ಮನೆಯಲ್ಲಿ ಪರಿಶೀಲನೆ ನಡೆಸಿದಾಗ, ಸುಮಾರು 8 ಲಕ್ಷ ಹಣ, ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ವೆಬ್‌–ಕ್ಯಾಮೆರಾ, ಪೆನ್‌ ಡ್ರೈವ್‌, ಮೆಮೊರಿ ಕಾರ್ಡ್‌ ಸೇರಿದಂತೆ ಡೇಟಾ ಸಂಗ್ರಹಿಸುವ ಹಲವು ಸಾಧನಗಳು ಹಾಗೂ  ಲೈಂಗಿಕ ಆಟಿಗಳು ದೊರೆತಿವೆ‘ ಅವುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಪ್ರಸ್ತುತ ಬಂಧಿತನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ಒಂದು ದಿನದ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

SCROLL FOR NEXT