ದೇಶ

ಡಿಡಿಸಿ ಚುನಾವಣೆ ಮೇಲೆ ಕಣ್ಣಿಟ್ಟಿದ್ದರು ಹತ್ಯೆಯಾದ ಉಗ್ರರು: ಜಮ್ಮು ಮತ್ತು ಕಾಶ್ಮೀರ ಪೊಲೀಸ್

Manjula VN

ಶ್ರೀನಗರ: ಶ್ರೀನಗರ ರಾಷ್ಟ್ರೀಯ ಹೆದ್ದಾರಿ ನಾಗ್ರೊಟಾದಲ್ಲಿ ನಡೆದ ಎನ್ಕೌಂಟರ್ ನಲ್ಲಿ ಹತರಾದ ನಾಲ್ವರು ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಜಿಲ್ಲಾ ಅಭಿವೃದ್ಧಿ ಮಂಡಳಿಯ (ಡಿಡಿಸಿ) ಚುನಾವಣೆಗೆ ಅಡ್ಡಿಯುಂಟು ಮಾಡುವ ಉದ್ದೇಶವನ್ನು ಹೊಂದಿದ್ದರು ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ. 

ಇಂದು ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರ ನಾಗ್ರೊಟಾದಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದರು. 

ಎನ್ಕೌಂಟರ್ ಕುರಿತು ಮಾಹಿತಿ ನೀಡಿರುವ ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿನ ರಾಜಕೀಯ ಪ್ರಕ್ರಿಯೆಯನ್ನು ನಾಶಪಡಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಇದಕ್ಕಾಗಿಯೇ ಕಳೆದ ಕೆಲವು ದಿನಗಳಿಂದ ಭಾರತದೊಳಗೆ ನುಸುಳುವಂತೆ ಉಗ್ರರಿಗೆ ಪಾಕಿಸ್ತಾನ ಪ್ರಚೋದನೆ ನೀಡುತ್ತಿದೆ. ಆದರೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿರುವುದರಿಂದ ಉಗ್ರರ ನುಸುಳುವಿಕೆ ಪ್ರಯತ್ನಗಳು ವಿಫಲಗೊಳ್ಳುತ್ತಿವೆ. ಪ್ರಸ್ತುತ ಹತ್ಯೆಯಾಗಿರುವ ಈ ನಾಲ್ವರು ಉಗ್ರರು ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸುವ ಉದ್ದೇಶವನ್ನು ಹೊಂದಿದ್ದರು ಎಂದು ಹೇಳಿದ್ದಾರೆ. 

ಆಗಸ್ಟ್ 15ರ ಸ್ವಾತಂತ್ರ್ಯ ದಿನವಾಗಲೀ, ಜನವರಿ 26 ಅಥವಾ ವಿಐಪಿಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದರೆ, ಚುನಾವಣಾ ಸಂದರ್ಭಗಲ್ಲಿ ಉಗ್ರರ ದಾಳಿ, ನುಸುಳಿವಿಕೆ ಯತ್ನಗಳು ಸತತವಾಗಿ ನಡೆಯುತ್ತಲೇ ಇರುತ್ತವೆ. ಆದರೆ, ನಾವು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಿರುತ್ತೇವೆ. ಚುನಾವಣೆಯಲ್ಲಿ ನಿಲ್ಲುವ ಅಭ್ಯರ್ಥಿಗಳಿಗಳಿಗೆ ಭದ್ರತೆಯನ್ನು ನೀಡುತ್ತಿದ್ದೇವೆ. ಪ್ರಚಾರದ ವೇಳೆ ಪ್ರತೀ ಕ್ಷೇತ್ರದಲ್ಲಿಯೂ ಭದ್ರತೆಯನ್ನು ನೀಡುತ್ತಿದ್ದೇವೆ. ಯಾರೂ ಭೀತಿಗೊಳಗಾಗಬಾರದು ಎಂದು ತಿಳಿಸಿದ್ದಾರೆ. 

ಒಬ್ಬೊಬ್ಬ ಅಭ್ಯರ್ಥಿಗೆ ಭದ್ರತೆ ನೀಡುವುದು ಕಷ್ಟಕರವಾಗಿರುತ್ತದೆ. ಸಾಮೂಹಿಕ ಭದ್ರತೆಯನ್ನು ನೀಡಿ ಸುರಕ್ಷಿತ ಪ್ರದೇಶದಲ್ಲಿರಿಸಲಾಗುತ್ತದೆ. ಯಾವುದೇ ಆಭ್ಯರ್ಥಿ ಪ್ರಚಾರಕ್ಕೆ ತೆರಳಿದಾಗ ಅವರಿಗೆ ದ್ವಿಗುಣ ಪ್ರಮಾಣದಲ್ಲಿ ಭದ್ರತೆಯನ್ನು ನೀಡಲಾಗುತ್ತದೆ. ಪ್ರಚಾರ ನಡೆಸುವ ಸಂಪೂರ್ಣ ಪ್ರದೇಶದಲ್ಲಿಯೂ ಭದ್ರತೆಯನ್ನು ನೀಡಲಾಗುತ್ತದೆ ಎಂದಿದ್ದಾರೆ. 

ಗಡಿ ನಿಯಂತ್ರಣ ರೇಖೆಯಾಚೆಗೆ ಸದ್ಯ ಸುಮಾರು 250 ಉಗ್ರರಿರಬಹುದು ಎಂಬ ಮಾಹಿತಿಗಳಿವೆ. ಪಾಕಿಸ್ತಾನ ಷಡ್ಯಂತ್ರವನ್ನು ವಿಫಲಗೊಳಿಸಲು ಭದ್ರತಾ ಪಡೆಗಳು ಸದಾ ಸನ್ನದ್ಧ ಸ್ಥಿತಿಯಲ್ಲಿವೆ. ಉಗ್ರರ ಪ್ರತೀ ಪ್ರಯತ್ನವನ್ನೂ ಭದ್ರತಾಪಡೆಗಳು ವಿಫಲಗೊಳ್ಳುವಂತೆ ಮಾಡಲಿದೆ ಎಂದು ಹೇಳಿದ್ದಾರೆ. 

ದಕ್ಷಿಣ ಕಾಶ್ಮೀರದ ಕಾಕಪೊರಾ ದಲ್ಲಿ ನಡೆದಿದ್ದ ಗ್ರೆನೇಡ್ ದಾಳಿ ಕುರಿತು ಮಾತನಾಡಿದ ಅವರು, ಸಿಆರ್'ಪಿಎಫ್ ಹಾಗೂ ಪೊಲೀಸರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಘಟನೆಯಲ್ಲಿ 12 ನಾಗರೀಕರು ಗಾಯಗೊಂಡಿದ್ದು, ನಾಲ್ವರನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದವರ ಆರೋಗ್ಯ ಸ್ಥಿರವಾಗಿದೆ. ದಾಳಿ ನಡೆಸಿದ ಉಗ್ರರ ಗುರ್ತಿಕೆಯನ್ನು ಪತ್ತೆಯಾಗಿದೆ. ಶೀಘ್ರದಲ್ಲಿಯೇ ಆತನನ್ನು ಬಂಧನಕ್ಕೊಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

SCROLL FOR NEXT