ದೇಶ

ನಾಲ್ವರು ಜೈಶ್ ಉಗ್ರರ ಹತ್ಯೆಯಿಂದ 'ದೊಡ್ಡ ದಾಳಿ'ಯ ಯತ್ನ ವಿಫಲಗೊಂಡಿದೆ: ಪ್ರಧಾನಿ ಮೋದಿ

Lingaraj Badiger

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಜೈಶ್ ಇ ಮೊಹಮ್ಮದ್(ಜೆಇಎಂ) ಸಂಘಟನೆಯ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉನ್ನತ ಮಟ್ಟದ ಭದ್ರತಾ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದು, ಭದ್ರತಾ ಪಡೆಗಳು "ದೊಡ್ಡ ದಾಳಿ ಮತ್ತು ವಿನಾಶ" ಮಾಡುವ ಉಗ್ರರ ಯತ್ನವನ್ನು ವಿಫಲಗೊಳಿಸಿವೆ ಎಂದು ಹೇಳಿದ್ದಾರೆ.

ನವೆಂಬರ್ 26ಕ್ಕೆ ಮುಂಬೈ ದಾಳಿಗೆ 12 ವರ್ಷವಾಗಲಿದ್ದು, ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ಜೈಶ್ ಉಗ್ರರು ಮತ್ತೊಂದು ದೊಡ್ಡ ದಾಳಿಗೆ ಸಂಚು ರೂಪಿಸಿದ್ದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು ಉನ್ನತ ಮಟ್ಟದ ಭದ್ರತಾ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. 

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೆಇಎಂಗೆ ಸೇರಿದ 4 ಉಗ್ರರನ್ನು ಹೊಡೆದುರಿಳಿಸಿರುವುದು ಮತ್ತು ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದನ್ನು ಗಮನಿಸಿದರೆ ಒಂದು ದೊಡ್ಡ ಹಾನಿ ಮತ್ತು ವಿನಾಶವನ್ನು ತಪ್ಪಿಸಿದಂತಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಅವರು ಮತ್ತೊಮ್ಮೆ ಅತ್ಯಂತ ಧೈರ್ಯ ಮತ್ತು ವೃತ್ತಿಪರತೆಯನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.

"ಭದ್ರತಾ ಪಡೆಗಳ ಜಾಗರೂಕತೆಗೆ ಧನ್ಯವಾದಗಳು, ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ತಳಮಟ್ಟದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗುರಿಯಾಗಿಸುವ ಕೆಟ್ಟ ಉದ್ದೇಶವನ್ನು ಸೋಲಿಸಿದ್ದಾರೆ" ಎಂದು ಪ್ರಧಾನಿ ಹೇಳಿದ್ದಾರೆ.

SCROLL FOR NEXT