ದೇಶ

ಆಕ್ಷೇಪಾರ್ಹ ಸಾಮಾಜಿಕ ಸಂದೇಶಕ್ಕೆ 5 ವರ್ಷ ಜೈಲು ಶಿಕ್ಷೆ: ಸಂಚಲನ ಸೃಷ್ಟಿಸಿದ ಕೇರಳ ಸರ್ಕಾರದ ಹೊಸ ಕಾನೂನು

Manjula VN

ತಿರುವಂತಪುರ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಯಾವುದೇ ಪೋಸ್ಟ್ ಆಕ್ಷೇಪಾರ್ಹ ಅಥವಾ ಬೆದರಿಕೆಯೊಡ್ಡುವಂತೆ ಇದ್ದರೆ ಇಂತಹ ಪೋಸ್ಟ್ ಹಾಕಿದವರನ್ನು ಅಥವಾ ಪೋಸ್ಟ್ ಹಂಚಿಕೊಂಡವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲು ಕೇರಳ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿದೆ. 

ಶಿಕ್ಷೆ ವಿಧಿಸಲು ಅವಕಾಶವಿರುವ ಸುಗ್ರೀವಾಜ್ಞೆಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಸಹಿ ಹಾಕಿದ್ದಾರೆ. 

ಅಪರಾಧಕ್ಕೆ ಪ್ರೇರೇಪಿಸುವ ಅಥವಾ ಯಾರಿಗಾದರೂ ಬೆದರಿಕೆಯೊಡ್ಡುವ ಸಂದೇಶವನ್ನು ಯಾವುದೇ ಮಾಧ್ಯಮದ ಮೂಲಕ ಸಿದ್ಧಪಡಿಸುವುದು, ಕಳಿಸುವುದು, ಹಂಚಿಕೊಳ್ಳುವುದು ಅಪರಾಧವಾಗುತ್ತದೆ. ಇಂಥವರಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹ 10,000 ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಕೇರಳ ಪೊಲೀಸ್ ಕಾಯ್ದೆಗೆ ಹೊಸದೊಂದು ಪರಿಚ್ಛೇದ (118 A) ಸೇರಿಸುವ ಈ ವಿಧಿಗೆ ಕೇರಳ ರಾಜ್ಯಪಾಲರು ಸಹಿ ಹಾಕಿದ್ದಾರೆ.

ಈ ಕಾನೂನು ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕಲು ಬಳಕೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿದ್ದು, ಹೊಸ ಕಾನೂನಿಗೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಆದರ, ಕಾನೂನನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಮರ್ಥಿಸಿಕೊಂಡಿದ್ದಾರೆ. 

ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ನಿಂದನೆ ಹೆಚ್ಚಾಗುತ್ತಿದೆ. ಈ ಪ್ರವೃತ್ತಿಗೆ ಕಡಿವಾಣ ಹಾಕಲು ಕಾನೂನು ಬೇಕಿತ್ತು ಎಂದು ಹೇಳಿದ್ದಾರೆ.

SCROLL FOR NEXT