ದೇಶ

ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಹೆಸರಿಡಲು ಯುಪಿ ಕ್ಯಾಬಿನೆಟ್ ಒಪ್ಪಿಗೆ

Raghavendra Adiga

ಲಖನೌ: ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಹೆಸರಿಡುವ ಪ್ರಸ್ತಾಪಕ್ಕೆ ಉತ್ತರ ಪ್ರದೇಶ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ. ಅಯೋಧ್ಯೆ ವಿಮಾನ ನಿಲ್ದಾಣ ಇನ್ನು ಮುಂದೆ "ಮರ್ಯಾದಾ ಪುರುಷೋತ್ತಮ ಶ್ರೀರಾಮವಿಮಾನ ನಿಲ್ದಾಣ" ಎಂದು ಕರೆಯಲ್ಪಡುತ್ತದೆ/

ಸಧ್ಯ ಸಚಿವ ಸಂಪುಟ ಅನುಮೋದನೆ ಪಡೆದ ಈ ಪ್ರಸ್ತಾವವನ್ನು ಈಗ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಲಾಗುವುದು.

ಪ್ರಸ್ತುತ  ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಹೇಳಿಕೆ ತಿಳಿಸಿದೆ. ರಾಜ್ಯ ಸರ್ಕಾರವು ನಗರ ಅಭಿವೃದ್ಧಿ ಮತ್ತು ಜಾಗತಿಕ ಧಾರ್ಮಿಕ ಪ್ರವಾಸೋದ್ಯಮ ತಾಣ ನಿರ್ಮಾಣದಲ್ಲಿ ತೊಡಗಿದ್ದು ಅಯೋಧ್ಯೆಯ ಸಂರಕ್ಷಣೆ, ಪ್ರವಾಸೋದ್ಯಮ ಮತ್ತು ಮೂಲಸೌಕರ್ಯಗಳ ಒಟ್ಟಾರೆ ಅಭಿವೃದ್ಧಿಗೆ ಜಾಗತಿಕ ಸಲಹೆಗಾರರನ್ನು ಸಹ ನೇಮಿಸಲಾಗುವುದು ಎಂದು ಮಾದ್ಯಮ ವರದಿ ಹೇಳಿದೆ.

ಈ ಪ್ರಸ್ತಾಪಕ್ಕೆ ಕ್ಯಾಬಿನೆಟ್ ಅನುಮೋದನೆ ಪಡೆದ ದ ನಂತರ ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಈ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. "ಯೋಗಿಯವರ ಉತ್ತರ ಪ್ರದೇಶ ಸರ್ಕಾರ ಕ್ಯಾಬಿನೆಟ್ ಅಯೋಧ್ಯೆ ವಿಮಾನ ನಿಲ್ದಾಣವನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮವಿಮಾನ ನಿಲ್ದಾಣ ಎಂದು ಹೆಸರಿಸಲು ಅನುಮೋದಿಸಿದೆ" ಎಂದು ಅವರು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮಾತ್ರವಲ್ಲದೆ "ಶ್ರೀರಾಮನ ನಗರ ಅಯೋಧ್ಯೆಯನ್ನು ವಿಶ್ವದ ಉನ್ನತ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿಸಲು  ರಾಜ್ಯ ಸರ್ಕಾರ ಬದ್ಧವಾಗಿದೆ" ಅವರು ಹೇಳಿದ್ದಾರೆ.

ರಾಜ್ಯದಲ್ಲಿ "ಲವ್ ಜಿಹಾದ್" ಪ್ರಕರಣಗಳನ್ನು ಭೇದಿಸಲು ಕಾನೂನುಬಾಹಿರ ಧಾರ್ಮಿಕ ಮತಾಂತರವನ್ನು ನಿಷೇಧಿಸುವ ಸುಗ್ರೀವಾಜ್ಞೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತು.

SCROLL FOR NEXT