ದೇಶ

ಪಂಜಾಬ್: ವಾಕ್ ಸಮರದ ನಂತರ ಅಮರೀಂದರ್ ಭೇಟಿ ಮಾಡಿದ ಸಿಧು, ಸಂಪುಟ ಸೇರುವ ಸಾಧ್ಯತೆ

Nagaraja AB

ಚಂಡೀಘಡ: ತೀವ್ರ ವಾಕ್ ಸಮರದ ಬಳಿಕ ಪಂಜಾಬ್ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಬುಧವಾರ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ರೈತರ ಪ್ರತಿಭಟನೆ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.

ಸಭೆಯ ನಂತರ ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ,ಸೌಹಾರ್ದಯುತ ಭೋಜನ ಸಭೆಯಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ನವಜೋತ್ ಸಿಂಗ್ ಸಿಧು , ಪಂಜಾಬ್ ಮತ್ತು ರಾಷ್ಟ್ರೀಯ ಹಿತಾಸಕ್ತಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಉಭಯ ನಾಯಕರು ಪ್ರಮುಖ ವಿಷಯಗಳ ಬಗ್ಗೆ ಒಂದು ಗಂಟೆಗೂ ಹೆಚ್ಚು ಕಾಲ ತಮ್ಮ ಅಲೋಚನೆಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಉಭಯ ನಾಯಕರ ನಡುವಿನ ಭೇಟಿಯು, ಸಿಧು ಮತ್ತೆ ಸಂಪುಟ ಸೇರುವ ಸಾಧ್ಯತೆಯನ್ನು ಸೂಚಿಸುತ್ತಿದೆ. ಸದ್ಯಕ್ಕೆ ಸಿಧು ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. 

ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಸಾಮರಸ್ಯ ತರುವ ಪ್ರಯತ್ನ ಮಾಡುವವರೆಗೂ ಉಭಯ ನಾಯಕರ ನಡುವೆ ಸುಮಾರು ಒಂದು ವರ್ಷಗಳಿಂದಲೂ ಶೀತಲ ಸಮರ ಏರ್ಪಟ್ಟಿತ್ತು. ರೈತರ ವಿಷಯದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪಂಜಾಬ್‌ಗೆ ಮೂರು ದಿನಗಳ ಭೇಟಿ ನೀಡಿದಾಗ, ಸಿಧು ಮೊದಲ ದಿನ ಹಾಜರಿದ್ದರು.

 ಪಂಜಾಬ್ ನಲ್ಲಿ ಸಿಧು ಪಾತ್ರದ ಬಗ್ಗೆ ರಾವತ್ ಒತ್ತಾಯಿಸುತ್ತಿರುವುದರಿಂದ ಅವರನ್ನು ಸಂಪುಟಕ್ಕೆ ಮರಳಿ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.

SCROLL FOR NEXT