ದೇಶ

'ಅಮರ್, ಅಕ್ಬರ್, ಆಂಟನಿ' ಎಂದು ಕರೆಸಿಕೊಳ್ಳುತ್ತಿದ್ದ ಕಾಂಗ್ರೆಸ್ ನ ಮೂವರು ನಾಯಕರು ಇವರು!

Sumana Upadhyaya

ನವದೆಹಲಿ: ಕೋವಿಡ್-19 ಮಹಾಮಾರಿಯಿಂದ 71 ವರ್ಷದ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ನಿಧನ ಹೊಂದಿದ್ದಾರೆ. ಗಾಂಧಿ ಕುಟುಂಬದ ಬಲಗೈ ಬಂಟ, ನಿಷ್ಠಾವಂತ ಎಂದು ಕರೆಸಿಕೊಂಡಿದ್ದ ಅಹ್ಮದ್ ಪಟೇಲ್ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರ ಕಾಲದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಕಾರ್ಯತಂತ್ರರಾಗಿದ್ದರು.

ಅದು 1985ನೇ ವರ್ಷ, ಅಹ್ಮದ್ ಪಟೇಲ್, ಅರುಣ್ ಸಿಂಗ್, ಆಸ್ಕರ್ ಫೆರ್ನಾಂಡಿಸ್ ರಾಜೀವ್ ಗಾಂಧಿಯವರ ಸಂಸದೀಯ ಕಾರ್ಯದರ್ಶಿಗಳಾಗಿ ಪ್ರಮಾಣ ವಚನ ಸ್ವೀಕರಿಸಿಕೊಂಡಿದ್ದರು. 1984ರ ಅಕ್ಟೋಬರ್ ತಿಂಗಳಲ್ಲಿ ಇಂದಿರಾ ಗಾಂಧಿಯವರ ಹತ್ಯೆಯಾದ ನಂತರ ರಾಜೀವ್ ಗಾಂಧಿ ಪ್ರಧಾನ ಮಂತ್ರಿಯಾದರು. ಆಗ ರಾಜೀವ್ ಗಾಂಧಿಯವರು ತಮ್ಮ ತಾಯಿ ರಚಿಸಿದ್ದ ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ತೆಗೆದು ಈ ಮೂವರು ನಾಯಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಿಕೊಂಡರು.

ಅಂದಿನಿಂದ ಈ ಮೂವರು ನಾಯಕರನ್ನು ಕಾಂಗ್ರೆಸ್ ನಲ್ಲಿ 'ಅಮರ್, ಅಕ್ಬರ್, ಆಂಟನಿ' ಎಂದು ಕರೆಯುತ್ತಿದ್ದರು. 1977ರಲ್ಲಿ ತೆರೆಕಂಡ ಅಮಿತಾಬ್ ಬಚ್ಚನ್ ಅಭಿನಯದ ಸೂಪರ್ ಹಿಟ್ ಚಿತ್ರ ಅಮರ್, ಅಕ್ಬರ್, ಆಂಟನಿ. ಅದೇ ಹೆಸರಿನಿಂದ ಈ ನಾಯಕರನ್ನು ಜನ ಕರೆಯುತ್ತಿದ್ದರು.

ಅಹ್ಮದ್ ಪಟೇಲ್ ಅವರ ಕಾಂಗ್ರೆಸ್ ನ ಒಡನಾಟ ದಶಕಗಳದ್ದು. 1998ರಲ್ಲಿ ಸೋನಿಯಾ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷೆಯಾದಾಗ ಅಂಬಿಕಾ ಸೋನಿಯವರನ್ನು ತಮ್ಮ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು. 2001ರಲ್ಲಿ ಅವರ ಜಾಗಕ್ಕೆ ಅಹ್ಮದ್ ಪಟೇಲ್ ಬಂದರು.

ಅಹ್ಮದ್ ಪಟೇಲ್ ಕೇವಲ ತಮ್ಮ ತವರು ರಾಜ್ಯ ಗುಜರಾತ್ ನಲ್ಲಿ ಮಾತ್ರ ರಾಜಕೀಯಕ್ಕೆ ಮೀಸಲಾಗಿರದೆ ಪಕ್ಷದ ಕೇಂದ್ರ ಮಟ್ಟದಲ್ಲಿಯೂ ಪ್ರಭಾವ ಹೊಂದಿದ್ದರು. ಅಹ್ಮದ್ ಪಟೇಲ್ ಯುಪಿಎ ಸರ್ಕಾರದಲ್ಲಿ ಎಂದಿಗೂ ಸಚಿವರಾಗಲಿಲ್ಲ. ಆದರೆ ಸರ್ಕಾರದಲ್ಲಿ ಕಿಂಗ್ ಮೇಕರ್ ಆಗಿ ಉಳಿದರು.

ಲೋಕಸಭೆ ಮತ್ತು ರಾಜ್ಯಸಭೆ ಒಟ್ಟು ಸೇರಿ 8 ಬಾರಿ ಸಂಸದರಾದ ಅಹ್ಮದ್ ಪಟೇಲ್ ಪಕ್ಷದಲ್ಲಿ ಅಧಿಕ ಪ್ರಭಾವ ಹೊಂದಿದ್ದರೂ ಸಚಿವ ಸ್ಥಾನಮಾನ ಸ್ವೀಕರಿಸದೆ ಸಣ್ಣ ಮಟ್ಟದಲ್ಲಿಯೇ ಪಕ್ಷ ಬಲವರ್ಧನೆಯಲ್ಲಿ ತೊಡಗಿದ್ದರು. 

SCROLL FOR NEXT