ದೇಶ

ಹತ್ರಾಸ್ ಗ್ಯಾಂಗ್ ರೇಪ್ ಸಂತ್ರಸ್ತೆ ಕುಟುಂಬವನ್ನು ಭೇಟಿ ಮಾಡಲು ಹೊರಟ ಟಿಎಂಸಿ ಸಂಸದರು: ಅರ್ಧದಲ್ಲೇ ತಡೆದ ಪೊಲೀಸರು

Sumana Upadhyaya

ನವದೆಹಲಿ: ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಸ್ಥರನ್ನು ಭೇಟಿ ಮಾಡಿ ಸಂತೈಸಲು ಹೋಗಿದ್ದ ಟಿಎಂಸಿ ನಾಯಕರನ್ನು ಉತ್ತರ ಪ್ರದೇಶ ಪೊಲೀಸರು ಅರ್ಧದಲ್ಲಿಯೇ ತಡೆದ ಘಟನೆ ನಡೆದಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ತೃಣಮೂಲ ಕಾಂಗ್ರೆಸ್, ನಮ್ಮ ಪಕ್ಷದ ಸಂಸದರನ್ನು ಪೊಲೀಸರು ತಡೆದರು, ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಮಹಿಳೆಯ ಮನೆಯಿಂದ ಸ್ವಲ್ಪ ದೂರವಿರುವಾಗಲೇ ಪೊಲೀಸರು ತಡೆದಿದ್ದಾರೆ. ನಮ್ಮ ಪಕ್ಷದ ನಿಯೋಗ ಸದಸ್ಯರು ದೆಹಲಿಯಿಂದ 200 ಕಿಲೋ ಮೀಟರ್ ಪ್ರಯಾಣ ಮಾಡಿ ಬಂದಿದ್ದರು. ಮಹಿಳೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳೋಣವೆಂದು ಹೋದರೆ ನಮಗೆ ಪೊಲೀಸರು ಅವಕಾಶ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಟಿಎಂಸಿ ನಿಯೋಗದಲ್ಲಿ ಸಂಸದರಾದ ಡೆರೆಕ್ ಒ ಬ್ರಿಯಾನ್, ಡಾ ಕಕೊಲಿ ಘೋಷ್ ದಸ್ತಿದಾರ್, ಪ್ರತಿಮಾ ಮೊಂಡಲ್ ಮತ್ತು ಮಾಜಿ ಸಂಸದೆ ಮಮತಾ ಠಾಕೂರ್ ಇದ್ದರು.

ನಾವು ಶಾಂತಿಯುತವಾಗಿ ಸಾಗುತ್ತಾ ಶಿಷ್ಟಾಚಾರ ಪಾಲಿಸುತ್ತಾ ಹತ್ರಾಸ್ ತಲುಪುವ ಹೊತ್ತಿಗೆ ನಮ್ಮನ್ನು ಪೊಲೀಸರು ತಡೆದರು, ನಾವು ಪ್ರತಿಭಟನೆ ಮಾಡುತ್ತಾ ಅಥವಾ ಆಯುಧಗಳನ್ನಿಟ್ಟುಕೊಂಡು ಸಾಗುತ್ತಿರಲಿಲ್ಲ. ಯಾಕೆ ನಮ್ಮನ್ನು ತಡೆದರು ಎಂದು ಗೊತ್ತಾಗುತ್ತಿಲ್ಲ, ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು ಹೋದರೆ ಚುನಾಯಿತ ಸಂಸದರನ್ನು ತಡೆಯುವ ಯಾವ ರೀತಿಯ ಜಂಗಲ್ ರಾಜ್ ಆಡಳಿತವಿದು ಎಂದು ಸಂಸದರೊಬ್ಬರು ಪ್ರಶ್ನಿಸಿದ್ದಾರೆ.

SCROLL FOR NEXT