ದೇಶ

ಆಯುರ್ವೇದ-ಯೋಗದಿಂದ ಕೊರೊನಾ ನಿಗ್ರಹ ಕ್ರಮಕ್ಕೆ ಮೋದಿ ಮೆಚ್ಚುಗೆ

Srinivasamurthy VN

ನವದೆಹಲಿ: ಆಯುರ್ವೇದ ಹಾಗೂ ಯೋಗದ ಮೂಲಕ ಕೊರೊನಾ ಸೋಂಕಿತರನ್ನು ಗುಣಮುಖರಾಗಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದ ವಿಶೇಷ ಶಿಷ್ಟಾಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ರೋಗನಿರೋಧಕ ಶಕ್ತಿ ವರ್ಧಿಸಿಕೊಳ್ಳುವುದು ಹಾಗೂ ಆರೋಗ್ಯ ಸ್ಥಿತಿ ಕಾಪಾಡಿಕೊಳ್ಳುವುದಕ್ಕೆ ಪ್ರಾಶಸ್ತ್ಯ ಕೊಡುವ ಮೂಲಕ ಕೋವಿಡ್-19 ವಿರುದ್ಧದ ಹೋರಾಟ ಪರಿಣಾಮಕಾರಿಯಾಗಿಸುವ ಈ ಪ್ರಯತ್ನ ನಿಜಕ್ಕೂ ಪ್ರಶಂಸನೀಯ, ಜನೋಪಯೋಗಿ ಎಂದು ಮೋದಿ  ಹೇಳಿದ್ದಾರೆ.

ಆರೋಗ್ಯ ಇಲಾಖೆ ಹಾಗೂ ಆಯುಷ್ ಸಚಿವಾಲಯ ಜಂಟಿಯಾಗಿ ರೂಪಿಸಿರುವ ನ್ಯಾಷನಲ್ ಕ್ಲಿನಿಕಲ್ ಮ್ಯಾನೇಜ್ಮೆಂಟ್ ವಿಶೇಷ ಶಿಷ್ಟಾಚಾರವನ್ನು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಕೋವಿಡ್‌–19 ಚಿಕಿತ್ಸೆಗೆ ಸಂಬಂಧಿಸಿದ ನಿರ್ವಹಣೆಗಾಗಿ ಕೇಂದ್ರ ಆರೋಗ್ಯ  ಸಚಿವಾಲಯ ಅನುಸರಿಸಬೇಕಾದ ಕ್ರಮಗಳನ್ನು ಬಿಡುಗಡೆ ಮಾಡಿತ್ತು. ಈ ಮಾರ್ಗಸೂಚಿಯಲ್ಲಿ ಯೋಗ, ಆಯುರ್ವೇದ ಗಿಡಮೂಲಿಕೆಗಳನ್ನು ಬಳಸುವಂತೆ ತಿಳಿಸಲಾಗಿದೆ. ಕೊರೊನಾ ವೈರಸ್‌ ಸೋಂಕು ತಡೆಗಟ್ಟಲು ಹಾಗೂ ರೋಗ ಹೆಚ್ಚುವುದನ್ನು ತಡೆಗಟ್ಟಲು ಉತ್ತಮ ರೋಗ ನಿರೋಧಕ ಶಕ್ತಿ ಹೊಂದಿರುವುದು  ಅತ್ಯಗತ್ಯವೆಂದು ತಿಳಿಯಲಾಗಿದೆ ಎಂದು ಆಯುಷ್‌ ಸಚಿವಾಲಯ ಶಿಷ್ಟಾಚಾರದ ದಾಖಲೆಗಳಲ್ಲಿ ಉಲ್ಲೇಖಿಸಿದೆ. ಕೋವಿಡ್‌ ರೋಗಿಗಳ ಪ್ರಾಥಮಿಕ ಸಂಪರ್ಕಿತರು ಹಾಗೂ ಅಪಾಯದ ಹಂತದಲ್ಲಿರುವ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ಅಶ್ವಗಂಧ, ಚ್ಯವನಪ್ರಾಶದಂತಹ ಔಷಧಗಳನ್ನು ಬಳಸುವಂತೆ ತಿಳಿಸಿದೆ.

ಆರೋಗ್ಯ ಸಚಿವಾಲಯದ ಶಿಫಾರಸುಗಳು:
-ಬಿಸಿ ನೀರಿಗೆ ಸ್ವಲ್ಪ ಅರಿಶಿನ ಮತ್ತು ಉಪ್ಪು ಸೇರಿಸಿ ಬಾಯಿ (ಗಂಟಲು) ಮುಕ್ಕಳಿಸುವುದು
-ಮನೆಯಿಂದ ಹೊರ ಹೋಗುವ ಮುನ್ನ ಅನು ತೈಲ ಅಥವಾ ಶದ್ಬಿಂದು ತೈಲ, ಹಸುವಿನ ತುಪ್ಪ ಅಥವಾ ಎಣ್ಣೆಯನ್ನು ಮೂಗಿಗೆ ಸವರುವುದು
-ಪುದೀನ, ಓಮಕಾಳು(ಅಜ್ವೈನ) ಅಥವಾ ಯುಕಲಿಪ್ಟಸ್‌ ತೈಲ ನೀರಿಗೆ ಹಾಕಿ ಸ್ಟೀಮ್‌ (ಹಬೆ) ತೆಗೆದುಕೊಳ್ಳುವುದು
-ದೈಹಿಕ ವ್ಯಾಯಾಮಗಳು/ ಯೋಗಾಭ್ಯಾಸ
-ಕುಡಿಯುವ ನೀರು: ನೀರಿಗೆ ಶುಂಠಿ, ಕೊತ್ತಂಬರಿ ಅಥವಾ ಜೀರಿಗೆ ಸೇರಿಸಿ ಬಿಸಿ ಮಾಡಿ ಕುಡಿಯುವುದು
-ಒಂದು ಲೋಟ ಬಿಸಿ ಹಾಲಿನೊಂದಿಗೆ (150 ಎಂಎಲ್‌) ಅರ್ಧ ಟೀ ಚಮಚ ಅರಿಶಿನ ಬೆರೆಸಿ ಕುಡಿಯುವುದು (ರಾತ್ರಿ ಸಮಯ); ಅಜೀರ್ಣ ಸಮಸ್ಯೆಯಿದ್ದರೆ ತೆಗೆದುಕೊಳ್ಳುವುದು ಬೇಡ
-ದಿನಕ್ಕೆ ಒಮ್ಮೆ ಗಿಡಮೂಲಿಕೆಗಳಿಂದ ಸಿದ್ಧಪಡಿಸಲಾದ ಆಯುಷ್ ಕಾಧ ಅಥವಾ ಕ್ವಾತ್‌
-ಗುಡುಚಿ, ಅಶ್ವಗಂಧ, ಆಯುಷ್–64 ಬಳಕೆ (ಕೋವಿಡ್‌ ದೃಢಪಟ್ಟವರಿಗೆ)

SCROLL FOR NEXT