ದೇಶ

ಶೋಪಿಯಾನ್ ಎನ್‍ಕೌಂಟರ್: ಮೂವರು ಉಗ್ರರು ಹತ

Lingaraj Badiger

ಶ್ರೀನಗರ: ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್‌ನಲ್ಲಿ ಮಂಗಳವಾರ ಭಯೋತ್ಪಾದಕರ ಶೋಧಕಾರ್ಯಾಚರಣೆ ವೇಳೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಅಪರಿಚಿತ ಉಗ್ರರನ್ನು ಭದ್ರತಾ ಪಡೆಗಳು ಬುಧವಾರ ಹತ್ಯೆ ಮಾಡಿವೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಏತನ್ಮಧ್ಯೆ, ವದಂತಿಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಅಂತರ್ಜಾಲ ಸೇವೆಯನ್ನು ಶೋಪಿಯಾನ್ ಜಿಲ್ಲೆಯಲ್ಲಿ ಸ್ಥಗಿತಗೊಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು(ಎಸ್‌ಒಜಿ), ರಾಷ್ಟ್ರೀಯ ರೈಫಲ್ಸ್ (ಆರ್‌ಆರ್) ಮತ್ತು ಸಿಆರ್‌ಪಿಎಫ್ ಜಂಟಿ ಶೋಧ ಕಾರ್ಯಾಚರಣೆಯನ್ನು ಶೋಪಿಯಾನ್‌ನ ಸಜ್ಜಾದ್ ಮೊಹಲ್ಲಾ ಸುಗನ್ ಜೈನ್‌ಪೋರಾದಲ್ಲಿ ಮಂಗಳವಾರ ಸಂಜೆಯಿಂದ ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.

ಎಲ್ಲಾ ನಿರ್ಗಮನ ಸ್ಥಳಗಳನ್ನು ಮೊಹರು ಮಾಡಿದ ನಂತರ ಭದ್ರತಾ ಪಡೆಗಳು ನಿರ್ದಿಷ್ಟ ಪ್ರದೇಶದತ್ತ ಸಾಗುತ್ತಿರುವಾಗ, ಅಲ್ಲಿ ಅಡಗಿಕೊಂಡಿದ್ದ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ವಿವೇಚನೆಯಿಲ್ಲದೆ ಗುಂಡು ಹಾರಿಸಿದರು. ಈ ವೇಳೆ ಭದ್ರತಾ ಪಡೆಗಳು ಸೂಕ್ತ ತಿರುಗೇಟು ನೀಡಿದವು.

ರಾತ್ರಿಯ ವೇಳೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತಾದರೂ, ಉಗ್ರರು ಪರಾರಿಯಾಗುವ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಯಿತು.

ಇಂದು ಬೆಳಗ್ಗೆ ನಸುಕಿನಲ್ಲಿ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ. ಬೆಳಗ್ಗೆ ನಡೆದ ಹೊಸ ಎನ್‌ಕೌಂಟರ್‌ನಲ್ಲಿ ಮೂವರು ಅಪರಿಚಿತ ಉಗ್ರರನ್ನು ಹತ್ಯೆ ಮಾಡಲಾಗಿದೆ. ಶೋಧಕಾರ್ಯ ಪ್ರಗತಿಯಲ್ಲಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.

SCROLL FOR NEXT