ದೇಶ

ಚಾಯ್ ಬಸಾ ಹಗರಣ: ಲಾಲು ಪ್ರಸಾದ್ ಯಾದವ್ ಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು, ಆದರೂ ಜೈಲುವಾಸ ಮುಂದುವರಿಕೆ!

Srinivasamurthy VN

ರಾಂಚಿ: ಬಹುಕೋಟಿ ಮೇವು ಹಗರಣದ ಚಾಯಿಬಾಸಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರಿಗೆ ಜಾರ್ಖಂಡ್‌ ಹೈಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಆದರೂ ಇತರೆ ಪ್ರಕರಣಗಳಲ್ಲಿ ಅವರು ಆರೋಪಿಯಾಗಿರುವುದರಿಂದ ಅವರ ಜೈಲು  ವಾಸ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.

ಮೇವು ಹಗರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳಲ್ಲಿ ಲಾಲು ಪ್ರಸಾದ್ ಯಾದವ್ ದೋಷಿಯಾಗಿದ್ದಾರೆ. ಪ್ರಸ್ತುತ ಅವರಿಗೆ ಜಾರ್ಖಂಡ್‌ ಹೈಕೋರ್ಟ್‌ ಚಾಯಿಬಾಸಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಿದೆಯಾದರೂ, ದುಮ್ಕಾ ಖಜಾನೆ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದೆ.  ಹೀಗಾಗಿ ಅವರು ಜೈಲಿನಲ್ಲಿಯೇ ಇರಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದುಮ್ಕಾ ಖಜಾನೆ ಪ್ರಕರಣದ ವಿಚಾರಣೆಯ ಸಿಬಿಐ ಪರ ವಕೀಲರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ವಿಚಾರಣೆಯನ್ನು ಮುಂದಕ್ಕೆ ಹಾಕಲಾಗಿತ್ತು.

1992–93ರಲ್ಲಿ ಚಾಯಿಬಾಸಾ ಖಜಾನೆಯಿಂದ 33.67 ಕೋಟಿ ರೂ ಹಣವನ್ನು ಅಕ್ರಮವಾಗಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಅಧ್ಯಕ್ಷ ಲಾಲು ಸೇರಿದಂತೆ ಒಟ್ಟು 16 ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆ ಅವಧಿಯಲ್ಲಿ ಲಾಲು ಅವರೇ ಬಿಹಾರದ ಮುಖ್ಯಮುಂತ್ರಿ  ಆಗಿದ್ದರು. 72 ವರ್ಷ ವಯಸ್ಸಿನ ಲಾಲು ಅವರು ರಾಂಚಿಯಲ್ಲಿರುವ ರಾಜೇಂದ್ರ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ (ರಿಮ್ಸ್‌) ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

SCROLL FOR NEXT