ದೇಶ

ಕಾಂಗ್ರೆಸ್ ಪಕ್ಷದ ಕೆಲ ಮುಖಂಡರಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವವರ ನಿಯಂತ್ರಣ: ಖುಷ್ಬೂ ವಾಗ್ದಾಳಿ

Nagaraja AB

ನವದೆಹಲಿ: ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಖುಷ್ಟೂ ಸುಂದರ್ ಇಂದು ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಸೇರುವ ಸಾಧ್ಯತೆ ಇರುವಂತೆಯೇ ಕಾಂಗ್ರೆಸ್ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪಕ್ಷದಲ್ಲಿನ ಉನ್ನತ ಮಟ್ಟದಲ್ಲಿರುವ ಕೆಲವು ವ್ಯಕ್ತಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ನಿಗ್ರಹಿಸುವ ಧೋರಣೆಯನ್ನು ಪ್ರತಿಭಟಿಸಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಸೋಮವಾರ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಖುಷ್ಬೂ, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡ ಬಳಿಕ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಯಾವುದೇ ಮಾನ್ಯತೆ, ಖ್ಯಾತಿ ಅಥವಾ ಇತರ ಲಾಭವಿಲ್ಲದೇ ಪಕ್ಷಕ್ಕಾಗಿ ದುಡಿದಿರುವುದಾಗಿ ತಿಳಿಸಿದ್ದಾರೆ.

ಪಕ್ಷದಲ್ಲಿ ವಾಸ್ತವ ಪರಿಸ್ಥಿತಿಯ ಸಂಪರ್ಕ ಇಲ್ಲದವರು ಅಥವಾ ಸಾರ್ವಜನಿಕವಾಗಿ ಗುರುತಿಸಿಕೊಳ್ಳದ ವ್ಯಕ್ತಿಗಳು ನಿಯಂತ್ರಣ ಹೇರುತ್ತಿದ್ದಾರೆ ಎಂದಿದ್ದಾರೆ. ಈ ಮೂಲಕ ಹಲವು ವರ್ಷಗಳ ಜೊತೆಗಿನ ಕಾಂಗ್ರೆಸ್ ಒಡನಾಟವನ್ನು ಕಳೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಈ ಮೂಲಕ ಖುಷ್ಬೂ ಸುಂದರ್ ಅವರನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಸ್ಥಾನದಿಂದ ಕೂಡಲೇ ಜಾರಿಗೆ ಬರುವಂತೆ ಕೆಳಗಿಳಿಸಲಾಗಿದೆ.

SCROLL FOR NEXT