ದೇಶ

'ಲಡಾಕ್ ಲಡಾಯಿ': ಇಂದು ಭಾರತ-ಚೀನಾ ಮಧ್ಯೆ 7ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ

Sumana Upadhyaya

ನವದೆಹಲಿ: ಭಾರತ-ಚೀನಾ ಮಧ್ಯೆ ಪೂರ್ವ ಲಡಾಕ್ ನಲ್ಲಿ ಸೇನೆ ನಿಯೋಜನೆ, ಗಡಿ ಸಂಘರ್ಷಕ್ಕೆ ಸಂಬಂಧಪಟ್ಟಂತೆ ಸೋಮವಾರ ಕಾರ್ಪ್ಸ್ ಕಮಾಂಡರ್ ಮಟ್ಟದ ಮತ್ತೊಂದು ಸುತ್ತಿನ ಮಹತ್ವದ ಮಾತುಕತೆ ನಡೆಯಲಿದೆ. ಈ ಹಿಂದಿನ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಯಾವುದೇ ಮಹತ್ವದ ಪ್ರಗತಿ ಮತ್ತು ಬೆಳವಣಿಗೆಗಳು ಕಾಣದಿರುವುದರಿಂದ ಇಂದಿನ ಮಾತುಕತೆ ಕೂಡ ಫಲಪ್ರದವಾಗಬಹುದು ಎಂದು ಸೇನೆಯ ಹಿರಿಯ ಅಧಿಕಾರಿಗಳಿಗೆ ಅನಿಸುತ್ತಿಲ್ಲ.

ಇಂದು ಸಭೆ ನಡೆಯಲಿದ್ದು ಆದರೆ ಯಾವುದೇ ಮಹತ್ವದ ಪ್ರಗತಿ ಕಾಣಬಹುದು ಎಂಬ ಆಶಾಭಾವನೆ ನಮಗಿಲ್ಲ. ಸೆಪ್ಟೆಂಬರ್ 21ರಂದು ನಡೆದ ಕಳೆದ ಸಭೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿರಲಿಲ್ಲ. ಇದು ಏಳನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆಯಾಗಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಲಡಾಕ್ ನ ದಕ್ಷಿಣ ತೀರ ಪಾಂಗೊಂಗ್ ಟ್ಸೊ ಸರೋವರದ ಬಳಿಯಿಂದ ಭಾರತ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಬೇಕೆಂದು ಚೀನಾ ಪಟ್ಟುಹಿಡಿದು ಕುಳಿತಿರುವುದರಿಂದ ಈ ಹಿಂದಿನ ಸಭೆಗಳಲ್ಲಿ ಯಾವುದೇ ಮಹತ್ವದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಸೇನೆಯನ್ನು ಹಿಂತೆಗೆದುಕೊಳ್ಳುವ ವಿಚಾರದಲ್ಲಿ ಎರಡೂ ದೇಶಗಳು ಪರಸ್ಪರ ಸಂಧಾನ ಸೂತ್ರಕ್ಕೆ ಬರಬೇಕಾಗಿದ್ದು ಎರಡೂ ದೇಶಗಳ ಒಪ್ಪಿಗೆಯಿದ್ದರೆ ಮಾತ್ರ ಸೇನೆ ನಿಲುಗಡೆ ಬಗ್ಗೆ ಮಾತುಕತೆ ಮುಂದುವರಿಸಲು ಸಾಧ್ಯ, ಎರಡೂ ದೇಶಗಳು ಒಟ್ಟಿಗೆ ಸೇನೆ ನಿಯೋಜನೆಯನ್ನು ಹಿಂಪಡೆಯಬೇಕೆಂಬುದು ಭಾರತದ ನಿಲುವಾಗಿದೆ.

ಇಂದಿನ ಕಮಾಂಡರ್ ಮಟ್ಟದ ಮಾತುಕತೆ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಅವರಿಗೆ ಕೊನೆಯ ಸಭೆಯಾಗಿದೆ. ಲೇಹ್ ಮೂಲದ ಮುಂದಿನ ಕಾರ್ಪ್ಸ್ ಕಮಾಂಡರ್ ಆಗಿ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಸಹ ಇಂದಿನ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮುಂದಿನ ತಿಂಗಳು ಭಾರತೀಯ ಮಿಲಿಟರಿ ಅಕಾಡೆಮಿಯ ಕಮಾಂಡೆಂಟ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಗಡಿ ವಾಸ್ತವ ರೇಖೆಯ ಒಪ್ಪಂದ 1959ರಲ್ಲಿಯೇ ಆಗಿದ್ದು, ಅಂದಿನ ಚೀನಾ ಅಧ್ಯಕ್ಷ ಝುಯು ಎನ್ಲೈ ಅವರು ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅವರ ಜೊತೆ ಒಪ್ಪಂದ ಮಾಡಿಕೊಂಡರು. ಆದರೆ ಆ ಒಪ್ಪಂದವನ್ನು ಭಾರತ ನಿರಾಕರಿಸುತ್ತಲೇ ಬಂದಿದೆ ಎಂಬುದು ಚೀನಾ ವಾದವಾಗಿದೆ.

SCROLL FOR NEXT