ದೇಶ

ಹೈದರಾಬಾದ್ ನಲ್ಲಿ ಮಹಾ ಮಳೆಗೆ 18 ಬಲಿ, ಎರಡು ದಿನ ರಜೆ ಘೋಷಣೆ, ಮನೆಯಿಂದ ಹೊರಬರದಂತೆ ಕೆಟಿಆರ್ ಮನವಿ

Lingaraj Badiger

ಹೈದರಾಬಾದ್: ಹೈದರಾಬಾದ್ ನಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಮಹಾ ಮಳೆಯಿಂದಾಗಿ ಇದುವರೆಗೆ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ. ರಸ್ತೆಗಳಲ್ಲಿ ನೀರು ನುಗ್ಗಿ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದ್ದು ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ನಗರದ ವಿವಿಧ ಪ್ರದೇಶಗಳಲ್ಲಿ ಗೋಡೆ ಕುಸಿದು, ವಿದ್ಯುತ್ ತಗುಲಿ ಮತ್ತು ನೀರಿನಲ್ಲಿ ಕೊಚ್ಚಿ ಹೋಗಿ 18 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಶಮ್‌ಶಾಬಾದ್‌ನಲ್ಲಿ ಎರಡು ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರೀ ಮಳೆಗೆ ಹೈದರಾಬಾದ್ ನ ಬಂದ್ಲಗುಡ ಪ್ರದೇಶದಲ್ಲಿ ಮಗು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ. ಸತತ ಮಳೆಗೆ ಬಂಡೆಯೊಂದು ನೀರಿನಲ್ಲಿ ಕೊಚ್ಚಿ ಬಂದು ಮನೆಗೆ ಬಿದ್ದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಹೈದರಾಬಾದ್ ನ ಶಂಶಾಬಾದ್ ಪ್ರದೇಶದ ಗಗನ್ ಪಹಾದ್ ಎಂಬಲ್ಲಿ  ಕಳೆದ ರಾತ್ರಿ ಸತತ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ಮೂವರು ಮೃತಪಟ್ಟಿದ್ದಾರೆ.

ಭಾರೀ ಮಳೆ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಎರಡು ದಿನ ರಜೆ ಘೋಷಣೆ ಮಾಡಿದ್ದು, ಸಚಿವ ಕೆಟಿ ರಾಮ ರಾವ್ ಅವರು ಮನೆಯಿಂದ ಹೊರಬರದಂತೆ ಜನತೆಗೆ ಮನವಿ ಮಾಡಿದ್ದಾರೆ.

ನಿರಂತರ ಮಳೆ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ(ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಮತ್ತು ನಗರಾಭಿವೃದ್ಧಿ) ಅರವಿಂದ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.

SCROLL FOR NEXT