ದೇಶ

ನವೆಂಬರ್ ಮೊದಲ ವಾರದಲ್ಲಿ ಮೂರ್ನಾಲ್ಕು ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆ

Nagaraja AB

ನವದೆಹಲಿ: ಚೀನಾ ಜೊತೆಗಿನ ಗಡಿ ಸಂಘರ್ಘ ಮುಂದುವರೆದಿರುವಂತೆಯೇ,ನವೆಂಬರ್ ಮೊದಲ ವಾರದಲ್ಲಿ ಹರಿಯಾಣದ ಅಂಬಲಾ ವಾಯುನೆಲೆಗೆ ಮೂರ್ನಾಲ್ಕು ರಫೇಲ್ ಯುದ್ಧ ವಿಮಾನಗಳ ಆಗಮನವೊಂದಿಗೆ ಭಾರತೀಯ ವಾಯುಪಡೆಯ ಸಾಮರ್ಥ್ಯ ಮತ್ತಷ್ಟ ಪ್ರಬಲವಾಗಲಿದೆ.

ಫ್ರೆಂಚ್ ದೇಶದಿಂದ ತಯಾರಿಸಲ್ಪಟ್ಟಿರುವ ಯುದ್ಧ ವಿಮಾನಗಳು ಎರಡನೇ ಹಂತದಲ್ಲಿ ಭಾರತಕ್ಕೆ ಆಗಮಿಸುತ್ತಿವೆ.ಮೊದಲ ಹಂತದ ಐದು ಯುದ್ಧ ವಿಮಾನಗಳು ಜುಲೈ 28 ರಂದು ಭಾರತಕ್ಕೆ ಆಗಮಿಸಿದ್ದವು. ಅವುಗಳನ್ನು ಸೆಪ್ಟೆಂಬರ್ 10 ರಂದು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ನರೇಂದ್ರ ಮೋದಿ ಸರ್ಕಾರ ಸೇರ್ಪಡೆಗೊಳಿಸಿತ್ತು.

ಎರಡನೇ ಹಂತದ ರಫೇಲ್ ಯುದ್ಧ ವಿಮಾನಗಳ ಆಗಮನಕ್ಕಾಗಿ ದೇಶದಲ್ಲಿ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ ಎಂದು ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ವಿಮಾನಗಳ ಸೇರ್ಪಡೆಯೊಂದಿಗೆ ಭಾರತೀಯ ವಾಯುಪಡೆಗೆ 8-9 ಯುದ್ಧ ವಿಮಾನಗಳು ಸೇರಿದಂತಾಗಲಿದ್ದು, ಪ್ರಸ್ತುತ ಉಂಟಾಗಿರುವ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ಕೆಲ ದಿನಗಳು ಇವುಗಳು ಕಾರ್ಯಾಚರಣೆ ಆರಂಭಿಸಲಿವೆ ಎಂದು ಹೇಳಲಾಗಿದೆ.

ರಫೆಲ್ ಯುದ್ಧ ವಿಮಾನಗಳು ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದ್ದು, ಲಡಾಖ್ ಸಂಘರ್ಷದ ವಲಯದಲ್ಲಿ ಸ್ವಲ್ಪ ಕಾಲ ಭಾರತೀಯ ವಾಯುಪಡೆಯೊಂದಿಗೆ ನಿಯೋಜಿಸಲಾಗಿತ್ತು.

ಅಸಿಸ್ಟೆಟ್ ಚೀಫ್ ಆಫ್ ಏರ್ ಸ್ಟಾಪ್ ( ಪ್ರಾಜೆಕ್ಟ್ ) ಏರ್ ವೈಸ್ ಮಾರ್ಷಲ್ ಎನ್ ತಿವಾರಿ ನೇತೃತ್ವದಲ್ಲಿನ ತಂಡ ಭಾರತೀಯ ವಾಯುಪಡೆ ತಂಡ ವಾರ್ಷಿಕ ನಿಯಮಿತ ಸಭೆಯ ಭಾಗವಾಗಿ ಯೋಜನೆ ಪರಾಮರ್ಶೆಗಾಗಿ ಫ್ರಾನ್ಸ್ ನಲ್ಲಿದ್ದು, ಅಲ್ಲಿ ಭಾರತೀಯ ಪೈಲಟ್ ಗಳಿಗೆ ತರಬೇತಿ ನೀಡಲಾಗುತ್ತಿದೆ. ಮಾರ್ಚ್ 2021ರೊಳಗೆ ಭಾರತೀಯ ಕಡೆಯವರ ತರಬೇತಿ ಹಂತ ಸಂಪೂರ್ಣವಾಗಿ ಮುಗಿಯುವ ಸಾಧ್ಯತೆಯಿದೆ.

ಪಶ್ಚಿಮ ಬಂಗಾಳದಲ್ಲಿನ ಹಶಿಮಾರಾ  ಮತ್ತು ಹರಿಯಾಣದ ಅಂಬಲಾ ವಾಯುನೆಲೆಯಲ್ಲಿ ಪ್ರತಿಯೊಂದು ರಫೇಲ್ ಯುದ್ಧ ವಿಮಾನಗಳಿಗೂ ಒಂದೊಂದು ಸ್ಕ್ವಾಡ್ರೋನ್ ನನ್ನು ಭಾರತೀಯ ವಾಯುಪಡೆ ನಿಯೋಜಿಸಲಿದೆ.

SCROLL FOR NEXT