ದೇಶ

ಸುಪ್ರೀಂ ನ್ಯಾಯಾಧೀಶರ ವಿರುದ್ಧ ಗಂಭೀರ ಆರೋಪ: ಜಗನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಿಜೆಐಗೆ ಕಾನೂನು ವಿದ್ಯಾರ್ಥಿಗಳಿಂದ ಪತ್ರ

Lingaraj Badiger

ನವದೆಹಲಿ: ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶರ ವಿರುದ್ಧ ಗಂಭೀರ ಆರೋಪದ ಮಾಡಿದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ದೇಶಾದ್ಯಂತ ಸುಮಾರು 100 ಕಾನೂನು ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಅವರಿಗೆ ಪತ್ರ ಬರೆದಿದ್ದಾರೆ.

ಕಾನೂನು ವಿದ್ಯಾರ್ಥಿಗಳು, ವಕೀಲ ಉತ್ಸವ ಬೈನ್ಸ್ ನೇತೃತ್ವದಲ್ಲಿ ಸಿಜೆಐಗೆ ಪತ್ರ ಬರೆದಿದ್ದು, ಯಾವುದೇ ಸಂದರ್ಭದಲ್ಲೂ ನಾವು ನ್ಯಾಯಾಂಗ ಸ್ವಾತಂತ್ರ್ಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಬಿಡುವುದಿಲ್ಲ ಮತ್ತು ನ್ಯಾಯಾಂಗದ ಅಪಖ್ಯಾತಿಗೆ ತರಲು ಅಧಿಕಾರದಲ್ಲಿರುವ ಯಾವುದೇ ರಾಜಕಾರಣಿಗೂ ಅವಕಾಶ ನೀಡುದಿಲ್ಲ ಎಂದು ಬೈನ್ಸ್ ಹೇಳಿದ್ದಾರೆ.

ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುವ ಮುಖ್ಯಮಂತ್ರಿಯೊಬ್ಬರು ಸಿಜೆಐಗೆ ಪತ್ರ ಬರೆದು ನ್ಯಾಯಾಧೀಶರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಅವರು ಸಂವಿಧಾನದಡಿಯಲ್ಲಿ ನಿಗದಿಪಡಿಸಿದ ಕಾರ್ಯವಿಧಾನವನ್ನು ನಿರ್ಲಕ್ಷಿಸಿದ್ದಾರೆ ಮತ್ತು ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಿದ್ದಾರೆ. ಇದು ಎಂದು ನ್ಯಾಯಾಂಗವನ್ನು ತಿರಸ್ಕರಿಸದಂತಾಗುತ್ತದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈ ಸಂಬಂಧ ಸಿಎಂ ಜಗನ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬೇಕು ಎಂದು ವಿದ್ಯಾರ್ಥಿಗಳು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರಿಗೆ ಮನವಿ ಮಾಡಿದ್ದಾರೆ.

ಜಗನ್ ಅವರು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಎಸ್.ಎ. ಬೊಬ್ಡೆ ಅವರಿಗೆ ಪತ್ರ ಬರೆದು, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎನ್ ವಿ ರಮಣ ಅವರು, ರಾಜ್ಯ ಉಚ್ಚ ನ್ಯಾಯಾಲಯದ ಕೆಲವು ತೀರ್ಮಾನಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ದೂರಿದ್ದರು. ಅಲ್ಲದೆ ರಮಣ ಅವರ ವಿರುದ್ದ ಪಕ್ಷಪಾತ ಮತ್ತು ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. 

SCROLL FOR NEXT