ದೇಶ

ಮಧ್ಯ ಪ್ರದೇಶ: ಸಚಿವೆಯನ್ನು 'ಐಟಮ್' ಎಂದು ಕರೆದು ವಿವಾದ ಮೈಮೇಲೆ ಎಳೆದುಕೊಂಡ ಮಾಜಿ ಸಿಎಂ ಕಮಲ್ ನಾಥ್

Sumana Upadhyaya

ಭೋಪಾಲ್: ಜ್ಯೋತಿರಾಧಿತ್ಯ ಸಿಂಧಿಯಾ ಅವರ ನಿಷ್ಠಾವಂತೆ ಹಾಗೂ ಮಧ್ಯ ಪ್ರದೇಶ ಸರ್ಕಾರದ ಸಚಿವೆ ಇಮರ್ತಿ ದೇವಿ ಅವರನ್ನು ಐಟಮ್ ಎಂದು ಕರೆದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆಯಾಗಿರುವ ಇಮರ್ತಿ ದೇವಿ ಕಾಂಗ್ರೆಸ್ ನಿಂದ ಗ್ವಾಲಿಯರ್ ನ ದಬ್ರಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಇದೀಗ ಅದೇ ಕ್ಷೇತ್ರದಿಂದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.

ಕಮಲ್ ನಾಥ್ ಸರ್ಕಾರದಲ್ಲಿದ್ದಾಗ ಕೂಡ ಇಮರ್ತಿ ದೇವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ವಹಿಸಿದ್ದರು. ಏಳು ತಿಂಗಳ ಹಿಂದೆ ಕಮಲ್ ನಾಥ್ ಸರ್ಕಾರ ಬಿದ್ದು ಹೋಯಿತು.

ನಿನ್ನೆ ದಬ್ರಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ರಾಜೆ ಅವರ ಪರ ಮತ ಯಾಚನೆ ಮಾಡುತ್ತಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಮಲ್ ನಾಥ್, ನಮ್ಮ ಅಭ್ಯರ್ಥಿ ಸುರೇಶ್ ರಾಜೆ ಸರಳ ಮನುಷ್ಯ, ಆಕೆಯಂಥಲ್ಲ, ಆಕೆಯ ಹೆಸರೇನು, ನಿಮಗೆಲ್ಲಾ ಆಕೆಯ ಬಗ್ಗೆ ನನಗಿಂತ ಚೆನ್ನಾಗಿ ಗೊತ್ತಿದೆ, ನೀವೆಲ್ಲಾ ನನಗೆ ಮೊದಲೇ ಎಚ್ಚರಿಕೆ ನೀಡಬೇಕಾಗಿತ್ತು, ಎಂತಹ ಐಟಮ್ ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಹಿರಿಯ ರಾಜಕಾರಿಣಿಯಾಗಿ ಕಮಲ್ ನಾಥ್ ಅವರ ಹೇಳಿಕೆ ನಿಜಕ್ಕೂ ಆಘಾತವನ್ನುಂಟುಮಾಡಿದೆ. ನಮ್ಮ ಸಂಪುಟದ ಸಚಿವೆ ಅದರಲ್ಲೂ ಮಹಿಳೆ ಬಗ್ಗೆ ಈ ರೀತಿ ಅಗೌರವವಾಗಿ ಮಾತನಾಡುವುದು ಸರಿಯಲ್ಲ, ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದ್ದು, ಮಹಿಳೆಯರಿಗೆ ಮತ್ತು ದಲಿತರಿಗೆ ಅವಮಾನ ಎಂದಿದ್ದಾರೆ.

ಇನ್ನೂ ಹಲವು ಬಿಜೆಪಿ ನಾಯಕರು ಕಮಲ್ ನಾಥ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಬಿಜೆಪಿ ನಿಯೋಗ ಭೋಪಾಲ್ ನಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಮಹಿಳೆ ಮತ್ತು ದಲಿತರ ವಿರುದ್ಧ ಕಮಲ್ ನಾಥ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರು ಸಲ್ಲಿಸಿದರು.

SCROLL FOR NEXT