ದೇಶ

ನಮ್ಮ ದೇಶದ 1 ಸಾವಿರ ಚದರ ಕಿ.ಮೀ. ಭೂಭಾಗವನ್ನು ಚೀನಾ ಆಕ್ರಮಿಸಿರುವುದು ಸತ್ಯ: ಮೆಹಬೂಬಾ ಮುಫ್ತಿ

Nagaraja AB

ನವದೆಹಲಿ: ನಮ್ಮ ದೇಶದ 1 ಸಾವಿರ ಚದರ ಕಿ. ಮೀ ಭೂ ಭಾಗವನ್ನು  ಚೀನಾ ಆಕ್ರಮಿಸಿರುವುದು ಸತ್ಯವಾಗಿದೆ. ಹೇಗೋ ನಿರ್ವಹಣೆ ಮಾಡಿ ಸುಮಾರು 40 ಕಿಲೋ ಮೀಟರ್ ಭೂ ಭಾಗವನ್ನು ಭಾರತ ಮರಳಿ ಪಡೆದುಕೊಂಡಿದೆ ಎಂದು ಪಿಡಿಪಿ ಮುಖಂಡೆ ಮೆಹಬೂಬಾ ಮುಪ್ತಿ ಹೇಳಿದ್ದಾರೆ.

14 ತಿಂಗಳ ನಂತರ ಗೃಹ ಬಂಧನದಿಂದ ಮುಕ್ತಿ ಪಡೆದ ನಂತರ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಹಬೂಬಾ ಮುಪ್ತಿ, ಚೀನಾ ಸಂವಿಧಾನದ 370 ವಿಧಿ ಬಗ್ಗೆ ಮಾತನಾಡುತ್ತಿದೆ. ಅದು ವಿವಾದಿತ ಪ್ರದೇಶವಾಗಿದ್ದು, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ, ವಿಶೇಷ ಸ್ಥಾನಮಾನ ರದ್ದುಗೊಳ್ಳುವವರೆಗೂ ಜಮ್ಮು-ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯ ದೃಷ್ಟಿಕೋನದಲ್ಲಿ ನೋಡಿರಲಿಲ್ಲ ಎಂದರು.

ಸಂವಿಧಾನದ 370 ನೇ ವಿಧಿ ರದ್ದತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೆಹಬೂಬಾ, ಸಂವಿಧಾನವನ್ನು ಅಪವಿತ್ರಗೊಳಿಸಲಾಗಿದೆ. ದೇಶ ಸಂವಿಧಾನದ ಮೇಲೆ ನಡೆಯಬೇಕು, ಬಿಜೆಪಿ ಚುನಾವಣಾ ಪ್ರಣಾಳಿಕೆ ಮೇಲೆ ನಡೆಯಬಾರದು ಎಂದು ಕಿಡಿಕಾರಿದರು.

ಮತ ಕೇಳಲು ಕೇಂದ್ರಕ್ಕೆ ಏನೂ ಇಲ್ಲ. ಮತ ಪಡೆಯಲು ಸಂವಿಧಾನದ 370ನೇ ವಿಧಿ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಧಾನಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು. 

ಜಮ್ಮು-ಕಾಶ್ಮೀರದ ಭಾವುಟವನ್ನು ಮರಳಿ ಪಡೆಯುವವರೆಗೂ ತ್ರಿವಣ ಧ್ವಜವನ್ನು ನಾವು ತೆಗೆದುಕೊಳ್ಳುವುದಿಲ್ಲ ಎಂದು ಮೆಹಬೂಬಾ ಮುಪ್ತಿ ಹೇಳಿದರು.

SCROLL FOR NEXT