ದೇಶ

ಚತ್ತೀಸ್‍ಗಢ: ದಂತೇವಾಡದಲ್ಲಿ 32 ನಕ್ಸಲರು ಶರಣಾಗತಿ

Manjula VN

ರಾಯ್‍ಪುರ: ಚತ್ತೀಸ್‌ಗಢದ ಬಸ್ತಾರ್ ವಿಭಾಗದ ದಂತೇವಾಡದಲ್ಲಿ 32 ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ.

10 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 32 ಮಂದಿ ನಕ್ಸಲರು ನಿನ್ನೆ ಬಾರ್ಸೂರ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆಂದು ತಿಳಿದುಬಂದಿದೆ. 

ಶರಣಾಗತಿ ಬಳಿಕ ಪ್ರತಿಕ್ರಿಯೆ ನೀಡಿರುವ ಮಾವೋವಾದಿಗಳು, ಜಿಲ್ಲಾ ಪೊಲೀಸರ ಪುನರ್ವಸತಿ ಅಭಿಯಾನದಿಂದ ನಾವು ಪ್ರಭಾವಿತರಾಗಿದ್ದೇವೆ. ನಮ್ಮ ಮಾವೋವಾದಿ ಸಿದ್ಧಾಂತಗಳು ನಿರಾಶೆ ಮೂಡಿಸಿದೆ ಎಂದು ತಿಳಿಸಿದ್ದಾರೆಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ. 

32 ಮಂದಿ ನಕ್ಸಲರಲ್ಲಿ 19 ಮಂದಿ ಬಕೆಲಿ ಗ್ರಾಮದ ನಿವಾಸಿಗಳಾಗಿದ್ದು, ನಾಲ್ವರು ಕೊರ್ಕೊಟ್ಟಿ, 3 ಉಡೆನಾರ್, ತುಮರಿಗುಂಡ ಮತ್ತು ಮಾತಾಸಿ ಗ್ರಾಮದವರಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ. ಆದರೆ, ಭದ್ರತಾ ಕಾರಣಗಳಿಂದಾಗಿ ನಕ್ಸಲರ ಗುರುತಿಕೆಯನ್ನು ಪೊಲೀಸರು ಬಹಿರಂಗಪಡಿಸಿಲ್ಲ. 

ಈ ಎಲ್ಲಾ 32 ನಕ್ಸಲರೂ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆ, ಕ್ರಾಂತಿಕಾರಿ ಮಹಿಳಾ ಆದಿವಾಸಿ ಸಂಘಟನೆ, ಚೆಟ್ನಾ ನಾಟ್ಯ ಮಂಡಳಿ ಮತ್ತು ಜನಾತನಾ ಸರ್ಕಾರ ಗ್ರೂಪ್'ಗೆ ಸೇರಿದವರಾಗಿದ್ದಾರೆಂದು ತಿಳಿದುಬಂದಿದೆ. 

ಶರಣಾಗತಿಯಾಗಿರುವ ಈ ಎಲ್ಲಾ ನಕ್ಸಲರೂ ಪೊಲೀಸ್ ಪಡೆಗಳ ಮೇಲೆ ನಡೆದಿದ್ದ ದಾಳಿಗಳು, ಮತದಾನ ಕ್ಷೇತ್ರಗಳ ಮೇಲೆ ನಡೆದಿದ್ದ ದಾಳಿಗಳು ಹಾಗೂ ಐಇಡಿ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಈ ಪೈಕಿ ಆರು ನಕ್ಸಲರ ತಲೆಗೆ ಬಹುಮಾನವನ್ನು ಪ್ರಕಟಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. 

SCROLL FOR NEXT