ದೇಶ

ಉಚಿತ ಕೊರೋನಾ ಲಸಿಕೆ ಘೋಷಣೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ: ಆಯೋಗ

Srinivasamurthy VN

ನವದೆಹಲಿ: ಉಚಿತ ಕೊರೋನಾ ಲಸಿಕೆ ವಿತರಣಾ ಘೋಷಣೆ ಚುನಾವಣಾ ನೀತಿ ಸಂಹಿತಿ ಉಲ್ಲಂಘನೆಯಾಗುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಬಿಹಾರ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ಉಚಿತ ಕೊರೋನಾ ಲಸಿಕೆ ವಿತರಣೆ ಮಾಡುವ ಘೋಷಣೆ ಮಾಡಿತ್ತು. ಬಿಜೆಪಿಯ ಈ ನಡೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದ್ದವು. ಆಡಳಿತಾರೂಢ ಸರ್ಕಾರವು ಮತದಾರರಿಗೆ ಆಮಿಷ ಒಡ್ಡುತ್ತಿದೆ. ಹೀಗಾಗಿ ಬಿಜೆಪಿ ವಿರುದ್ಧ ಕಠಿಣ ಕ್ರಮ  ಕೈಗೊಳ್ಳುವಂತೆಯೂ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದವು.

ಅಂತೆಯೇ ಬಿಜೆಪಿಯ ಈ ಘೋಷಣೆಯನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸಾಕೇತ್‌ ಗೋಖಲೆ ಅವರು ಆಯೋಗಕ್ಕೆ ದೂರು ನೀಡಿದ್ದರು. ಬಿಜೆಪಿಯ ಭರವಸೆಯು ತಾರತಮ್ಯದಿಂದ ಕೂಡಿದ್ದು, ಚುನಾವಣೆಯ ವೇಳೆ ಕೇಂದ್ರ ಸರ್ಕಾರದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರು  ದೂರಿನಲ್ಲಿ ಉಲ್ಲೇಖಿಸಿದ್ದರು. ಈ ದೂರನ್ನು ಕೈಗೆತ್ತಿಗೊಂಡ ಆಯೋಗ, ಬಿಜೆಪಿ ನೀಡಿದ್ದ ಭರವಸೆಯು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

‘ನಿಗದಿತ ಚುನಾವಣೆಯ ವೇಳೆ ಮತದಾರರನ್ನು ಓಲೈಸುವುದಕ್ಕಾಗಿ ಎಲ್ಲಾ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುವುದು ಸಾಮಾನ್ಯ. ಬಿಜೆಪಿಯ ಭರವಸೆಯು ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿಲ್ಲ ಎಂದು ಆಯೋಗ ಹೇಳಿದೆ.

SCROLL FOR NEXT