ದೇಶ

ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯ ನಡುವೆಯೇ ರಷ್ಯಾಕ್ಕೆ ಪ್ರಯಾಣ ಬೆಳೆಸಿದ ರಾಜನಾಥ್ ಸಿಂಗ್;ಎಸ್ ಸಿಒ ಸಭೆಯಲ್ಲಿ ಭಾಗಿ

Sumana Upadhyaya

ನವದೆಹಲಿ:ಶಾಂಘೈ ಸಹಕಾರ ಸಂಘಟನೆ(ಎಸ್ ಸಿಒ)ಯ ಪ್ರಮುಖ ಸಭೆಯಲ್ಲಿ ಭಾಗವಹಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಮೂರು ದಿನಗಳ ರಷ್ಯಾ ಪ್ರವಾಸಕ್ಕೆ ತೆರಳಿದ್ದಾರೆ.

ಶಾಂಘೈ ಸಹಕಾರ ಸಂಘಟನೆಯ ಎಲ್ಲಾ 8 ಸದಸ್ಯ ರಾಷ್ಟ್ರಗಳ ರಕ್ಷಣಾ ಸಚಿವರು ಭಾಗವಹಿಸಲಿದ್ದು ಪ್ರಾದೇಶಿಕ ರಕ್ಷಣಾ ಸವಾಲುಗಳಾದ ಭಯೋತ್ಪಾದನೆ, ತೀವ್ರಗಾಮಿತ್ವ ಮೊದಲಾದವುಗಳನ್ನು ಸಾಮೂಹಿಕವಾಗಿ ಹೇಗೆ ಎದುರಿಸುವುದು ಎಂಬ ಬಗ್ಗೆ ಮಾಸ್ಕೊದಲ್ಲಿ ಶುಕ್ರವಾರ ಚರ್ಚೆ ನಡೆಸುವ ಸಾಧ್ಯತೆಯಿದೆ. ರಷ್ಯಾದೊಂದಿಗೆ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ವೃದ್ಧಿಸುವಲ್ಲಿ ಕೂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಲ್ಲಿನ ರಕ್ಷಣಾ ಸಚಿವ ಸರ್ಜಿ ಶೊಯ್ಗು ಜೊತೆ ಮಾತುಕತೆ ನಡೆಸಲಿದ್ದಾರೆ.

ಭಾರತ -ಚೀನಾ ಮಧ್ಯೆ ಪೂರ್ವ ಲಡಾಕ್ ನಲ್ಲಿ ಸೇನೆ ನಿಲುಗಡೆಯ ಉದ್ವಿಗ್ನ ಸ್ಥಿತಿ ಮುಂದುವರಿದಿರುವ ಮಧ್ಯೆಯೇ ಈ ಸಭೆ ನಡೆಯುತ್ತಿರುವುದು ಮಹತ್ವವಾಗಿದೆ. ಸಭೆಯಲ್ಲಿ ಪಾಕಿಸ್ತಾನ ಮತ್ತು ಚೀನಾ ದೇಶಗಳ ರಕ್ಷಣಾ ಸಚಿವರುಗಳು ಸಹ ಭಾಗವಹಿಸುತ್ತಿದ್ದಾರೆ. ಹಾಗಾದರೆ ಚೀನಾ ರಕ್ಷಣಾ ಸಚಿವರ ಜೊತೆ ಮಾತುಕತೆ ನಡೆಯಲಿದೆಯೇ ಎಂದು ಕೇಳಿದ್ದಕ್ಕೆ ಇಲ್ಲ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ-ರಷ್ಯಾ ಮಾತುಕತೆಯಲ್ಲಿ ಏನೇನು ಬರಲಿದೆ?: ಕಾರ್ಯತಂತ್ರ ಸಹಭಾಗಿತ್ವಕ್ಕೆ ಭಾರತ ಮತ್ತು ರಷ್ಯಾ ಮುಂದಾಗಿರುವುದು ಸೌಭಾಗ್ಯವೇ ಸರಿ. ಇನ್ನಷ್ಟು ಸಹಭಾಗಿತ್ವವನ್ನು ಮುಂದಿನ ದಿನಗಳಲ್ಲಿ ಭಾರತ ರಷ್ಯಾದೊಂದಿಗೆ ಹೊಂದಲು ಬಯಸುತ್ತದೆ ಎಂದು ರಾಜನಾಥ್ ಸಿಂಗ್ ಇಂದು ಪ್ರವಾಸ ಆರಂಭಕ್ಕೆ ಮುನ್ನ ಟ್ವೀಟ್ ಮಾಡಿದ್ದಾರೆ.

ನಾಡಿದ್ದಿನ ಮಾತುಕತೆಯಲ್ಲಿ ರಾಜನಾಥ್ ಸಿಂಗ್ ಅವರು ಭಾರತಕ್ಕೆ ರಷ್ಯಾ ಪೂರೈಸಲಿರುವ ಹಲವು ಶಸ್ತ್ರಾಸ್ತ್ರಗಳನ್ನು ಶೀಘ್ರದಲ್ಲಿಯೇ ಒದಗಿಸುವಂತೆ ಒತ್ತಾಯಿಸಲಿದ್ದಾರೆ. ಎಕೆ 203 ರೈಫಲ್ ನ್ನು ಪೂರೈಸುವ ಕುರಿತು ಅಧಿಕೃತವಾಗಿ ಸಹಿ ಹಾಕುವ ನಿರೀಕ್ಷೆಯಿದೆ. ಎಸ್ -400 ಕ್ಷಿಪಣಿಯನ್ನು ಭಾರತದ ರಕ್ಷಣಾ ಪಡೆಗೆ ಆದಷ್ಟು ಶೀಘ್ರವೇ ಪೂರೈಸುವಂತೆ ರಾಜನಾಥ್ ಸಿಂಗ್ ಒತ್ತಾಯಿಸಲಿದ್ದಾರೆ.

ರಷ್ಯಾ ಭಾರತಕ್ಕೆ ಎಸ್ -400 ಮೇಲ್ಮೈ ಕ್ಷಿಪಣಿ 2021ರ ಕೊನೆಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಇದಕ್ಕೆ 2018ರ ಅಕ್ಟೋಬರ್ ನಲ್ಲಿ ಭಾರತ ಸಹಿ ಹಾಕಿದ್ದು 5 ಶತಕೋಟಿ ಡಾಲರ್ ಮೊತ್ತದ ಕ್ಷಿಪಣಿಯಿದು.

SCROLL FOR NEXT