ದೇಶ

ಫೇಸ್ ಬುಕ್ ಇಂಡಿಯಾ ಸಿಬ್ಬಂದಿಯಿಂದ ಪ್ರಧಾನಿ, ಕೇಂದ್ರ ಸಚಿವರುಗಳ ವಿರುದ್ಧ ಅಪಪ್ರಚಾರ: ರವಿಶಂಕರ್ ಪ್ರಸಾದ್

Sumana Upadhyaya

ವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಂಪುಟದ ಹಿರಿಯ ಸಚಿವರನ್ನು ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ನಿಂದಿಸುವ ಕೆಲಸವನ್ನು ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರಿಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಪತ್ರ ಬರೆದಿದ್ದಾರೆ.

2019ರ ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ, ಬಲ ಪಂಥೀಯ ತತ್ವದ ನಾಯಕರಿಗೆ ಬೆಂಬಲ ನೀಡುವವರಿಗೆ ಫೇಸ್ ಬುಕ್ ನಲ್ಲಿ ಪ್ರಚಾರ ನೀಡದಂತೆ, ಅವರ ವಿಚಾರಧಾರೆಗಳು ಹೆಚ್ಚು ಜನರಿಗೆ ತಲುಪದಂತೆ ಫೇಸ್ ಬುಕ್ ಇಂಡಿಯಾದ ಸಿಬ್ಬಂದಿಗಳು ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದರು ಎಂದು ರವಿಶಂಕರ್ ಪ್ರಸಾದ್ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಹತ್ತಾರು ಪತ್ರಗಳನ್ನು ಫೇಸ್ ಬುಕ್ ಆಡಳಿತ ಮಂಡಳಿಗೆ ಬರೆದಿದ್ದರೂ ಅಲ್ಲಿಂದ ಪ್ರತಿಕ್ರಿಯೆ ಬರಲಿಲ್ಲ. ಇಂತಹ ಪಕ್ಷಪಾತೀಯ ಮತ್ತು ಪಾರುಪತ್ಯ ಹೊಂದಿರುವ ರಾಜಕೀಯ ಚಿಂತನೆಗಳು, ನಂಬಿಕೆಗಳು ನಿಮ್ಮ ಫೇಸ್ ಬುಕ್ ಇಂಡಿಯಾ ಸಿಬ್ಬಂದಿ ತಂಡದಲ್ಲಿ ಕಂಡುಬಂದಿದೆ. ಆದರೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯಲ್ಲಿ ಇಂತಹ ಪೂರ್ವಾಗ್ರಹ ಪೀಡಿತ ಜನರನ್ನು ಸೋಲಿಸಿ ನಿಜವಾದ ಜನಪರ ಆಡಳಿತವನ್ನು ನೀಡುವ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪ್ರಾಬಲ್ಯ ಸಾಧಿಸಿ ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಅಪಖ್ಯಾತಿಗೊಳಿಸಲು ಇಂಥವರು ಪ್ರಯತ್ನಿಸುತ್ತಿದ್ದಾರೆ.ಆಂತರಿಕವಾಗಿ ಒಡೆಯಲು, ಸಾಮಾಜಿಕ ಅಸ್ಥಿರತೆ ಮೂಡಿಸಲು ಇಂಥವರಿಗೆ ಸಾಮಾಜಿಕ ಮಾಧ್ಯಮ ಇತ್ತೀಚೆಗೆ ಪ್ರಮುಖ ಅಸ್ತ್ರವಾಗಿದೆ ಎಂದು ಸಚಿವ ರವಿಶಂಕರ್ ಪ್ರಸಾದ್ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ಕೇಂದ್ರ ಕಚೇರಿಯಿಂದ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿ ಫೇಸ್ ಬುಕ್ ಇಂಡಿಯಾ ತಂಡದ ಕಾರ್ಯನಿರ್ವಹಣೆ ಬಗ್ಗೆ ತನಿಖೆ ನಡೆಸಿ ಎರಡು ತಿಂಗಳೊಳಗೆ ವರದಿ ನೀಡಲು ಹೇಳಿ, ಆ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಕೂಡ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

SCROLL FOR NEXT