ದೇಶ

ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಫೇಸ್ ಬುಕ್ ಬಿಜೆಪಿ ಪರ ಪ್ರಚಾರ ಮಾಡಿತ್ತು: ಟಿಎಂಸಿ ಗಂಭೀರ ಆರೋಪ

Sumana Upadhyaya

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಫೇಸ್ ಬುಕ್ ಬಿಜೆಪಿ ಪರ ಒಲವು ತೋರಿಸುತ್ತಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್, ಸಿಇಒ ಮಾರ್ಕ್ ಝುಕರ್ ಬರ್ಗ್ ಗೆ ಪತ್ರ ಬರೆದಿದ್ದು ತನ್ನ ಆರೋಪವನ್ನು ಪುಷ್ಟೀಕರಿಸಲು ಉದಾಹರಣೆಗಳಿವೆ ಎಂದು ಹೇಳಿದೆ.

ಈ ಸಂಬಂಧ ಪಕ್ಷದ ಸಂಸದ ಡೆರೆಕ್ ಓಬ್ರಿಯನ್ ಮಾರ್ಕ್ ಝುಕರ್ ಬರ್ಗ್ ಗೆ ಪತ್ರ ಬರೆದಿದ್ದಾರೆ. ಬಿಜೆಪಿ ಹೊರತುಪಡಿಸಿ ಬೇರೆ ಪಕ್ಷಗಳ ಬಗ್ಗೆ ಫೇಸ್ ಬುಕ್ ನಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಸಂಬಂಧ ಈ ಹಿಂದೆ ತಮ್ಮನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಕೂಡ ಹೇಳಿದ್ದೆ. ಕಳೆದ ಜೂನ್ ನಲ್ಲಿ ಸಂಸತ್ತು ಕಲಾಪದಲ್ಲಿ ನಾವು ಪ್ರಸ್ತಾಪ ಮಾಡಿದ್ದೆವು ಎಂದು ಪತ್ರದಲ್ಲಿ ತೃಣಮೂಲ ಸಂಸದ ಹೇಳಿದ್ದಾರೆ.

2015ರಲ್ಲಿ ದೆಹಲಿಯಲ್ಲಿ ಓಬ್ರಿಯನ್ ಮಾರ್ಕ್ ಝುಕರ್ ಬರ್ಗ್ ಅವರನ್ನು ಭೇಟಿ ಮಾಡಿದ್ದರು ಎಂದು ತೃಣಮೂಲ ಕಾಂಗ್ರೆಸ್ ಮೂಲಗಳು ತಿಳಿಸಿವೆ. 2014ರ ಮತ್ತು 2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ಹೊರತುಪಡಿಸಿ ಬೇರೆ ಪಕ್ಷಗಳ ಬಗ್ಗೆ ಫೇಸ್ ಬುಕ್ ನಲ್ಲಿ ನಕಾರಾತ್ಮಕ ವರದಿಗಳು, ಪ್ರಚಾರಗಳು ಹೆಚ್ಚು ಆಗುತ್ತಿದ್ದವು, ಇದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದು ಓಬ್ರಿಯನ್ ಮೊನ್ನೆ ಆಗಸ್ಟ್ 31ರಂದು ಮಾರ್ಕ್ ಝುಕರ್ ಬರ್ಗ್ ಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

ಇನ್ನು ಕೆಲ ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದ್ದು ನಮ್ಮ ರಾಜ್ಯದಲ್ಲಿ ಫೇಸ್ ಬುಕ್ ಪೇಜ್ ಗಳನ್ನು ಮತ್ತು ಅಕೌಂಟ್ ನ್ನು ತಡೆಹಿಡಿದಿರುವುದರ ಹಿಂದೆ ಬಿಜೆಪಿ ಕೈವಾಡವಿದೆ. ಫೇಸ್ ಬುಕ್  ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಬಿಜೆಪಿ ಸರ್ಕಾರದ ನಡುವೆ ಸಾಕಷ್ಟು ಒಪ್ಪಂದಗಳು, ವ್ಯವಹಾರಗಳು ನಡೆಯುತ್ತಿವೆ ಎಂಬುದಕ್ಕೆ ಬಹಿರಂಗವಾಗಿ ಸಾಕಷ್ಟು ಪುರಾವೆಗಳು ಸಿಗುತ್ತವೆ ಎಂದು ರಾಜ್ಯಸಭಾ ಸದಸ್ಯರಾಗಿರುವ ಓಬ್ರಿಯನ್ ಹೇಳಿದ್ದಾರೆ.

SCROLL FOR NEXT