ದೇಶ

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ, ಖಾಸಗಿ ಮಸೂದೆ ಮಂಡನೆ ಇರುವುದಿಲ್ಲ, ಶೂನ್ಯ ಅವಧಿ ಮೊಟಕು!

Sumana Upadhyaya

ನವದೆಹಲಿ:ಕೊರೋನಾ ಆತಂಕದ ನಡುವೆ ಸಂಸತ್ತಿನ ಮುಂಗಾರು ಅಧಿವೇಶನ ಇದೇ ತಿಂಗಳ 14ರಿಂದ ಆರಂಭವಾಗುತ್ತಿದ್ದು ಈ ಬಾರಿ ಕಲಾಪ ಮಧ್ಯೆ ಪ್ರಶ್ನೋತ್ತರ ಅವಧಿ ಇರುವುದಿಲ್ಲ. ಖಾಸಗಿ ಮಸೂದೆಗಳ ಮಂಡನೆ ಕೂಡ ಇರುವುದಿಲ್ಲ, ಶೂನ್ಯ ಅವಧಿ ಮೊಟಕುಗೊಳಿಸಲಾಗಿದೆ ಎಂದು ಲೋಕಸಭೆ ಮತ್ತು ರಾಜ್ಯಸಭೆ ಸಚಿವಾಲಯಗಳು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿವೆ.

ಪ್ರಶ್ನೋತ್ತರ ಕಲಾಪ ಮತ್ತು ಖಾಸಗಿ ಮಸೂದೆ ಮಂಡನೆ ಹೊರತುಪಡಿಸಿ ಬೇರೆಲ್ಲಾ ನಡಾವಳಿಗಳು ನಿಗದಿಯಂತೆ ಸಾಗಲಿವೆ ಎಂದು ಅಧಿಸೂಚನೆ ತಿಳಿಸಿದೆ.

ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರವರೆಗೆ ನಡೆಯುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ, ಕೊರೋನಾ ದೇಶದೆಲ್ಲೆಡೆ ಹೆಚ್ಚುತ್ತಿರುವುದರಿಂದ ಕಲಾಪದಲ್ಲಿ ಪಾಲ್ಗೊಳ್ಳುವ ಸದಸ್ಯರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಧಿವೇಶನಕ್ಕೆ ಸಂಸತ್ತಿಗೆ ಬರುವ 72 ಗಂಟೆಗಳ ಮುನ್ನ ಕಡ್ಡಾಯವಾಗಿ ಪ್ರತಿಯೊಬ್ಬರೂ ಕೊರೋನಾ ಪರೀಕ್ಷೆ ಮಾಡಿಸಿಕೊಂಡು ಬರಬೇಕು ಎಂದು ಸೂಚನೆ ನೀಡಲಾಗಿದೆ.

ಎರಡು ಶಿಫ್ಟ್ ನಲ್ಲಿ ಕಲಾಪ: ಪ್ರತಿದಿನದ ಮಾದರಿಯಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದ್ದು ವಾರಾಂತ್ಯಗಳಲ್ಲಿ ಕೂಡ ಈ ಬಾರಿ ವಿರಾಮ ಇರುವುದಿಲ್ಲ. ಕಲಾಪ ಶನಿವಾರ ಮತ್ತು ಭಾನುವಾರ ಕೂಡ ಜರುಗಲಿವೆ. ಸೆಪ್ಟೆಂಬರ್ 14ರಂದು ಲೋಕಸಭಾ ಅಧಿವೇಶನ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ರಾಜ್ಯಸಭಾ ಕಲಾಪ ಅಪರಾಹ್ನ 3 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ನಡೆಯಲಿದೆ.

ಸೆಪ್ಟೆಂಬರ್ 14ರ ನಂತರ ರಾಜ್ಯಸಭಾ ಅಧಿವೇಶನ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲೋಕಸಭಾ ಕಲಾಪ ಅಪರಾಹ್ನ 3 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ನಡೆಯಲಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಬದಲಾವಣೆ ಮಾಡಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಪ್ರಶ್ನೋತ್ತರ ಅವಧಿ ಮತ್ತು ಖಾಸಗಿ ಮಸೂದೆ ಮಂಡನೆಗಳು ಇರುವುದಿಲ್ಲ ಎಂದು ಲೋಕಸಭಾಧ್ಯಕ್ಷರು ತಿಳಿಸಿದ್ದಾರೆ.

ಪ್ರಜಾಪ್ರಭುತ್ವದ ಕಗ್ಗೊಲೆ: ಆದರೆ ಇದನ್ನು ಪ್ರತಿಪಕ್ಷಗಳು ವಿರೋಧಿಸಿವೆ.ಪ್ರಶ್ನೋತ್ತರ ಕಲಾಪ ಇಲ್ಲದಿರುವುದರಿಂದ  ವಿರೋಧ ಪಕ್ಷಗಳ ಸಂಸದರು ಪ್ರಶ್ನೆ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ, ಕೋವಿಡ್-19 ಹೆಸರಿನಲ್ಲಿ ಪ್ರಜಾಪ್ರಭುತ್ವವನ್ನು ಕೊಲ್ಲಲಾಗುತ್ತಿದೆ ಎಂದು ಟಿಎಂಸಿ ಸಂಸದ ಓಬ್ರಿಯನ್ ಆರೋಪಿಸಿದ್ದಾರೆ.

ಕಳೆದ ವಾರ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಕಲಾಪದಲ್ಲಿ ಪ್ರಶ್ನೋತ್ತರ ಅವಧಿ ಮತ್ತು ಶೂನ್ಯ ಅವಧಿಯನ್ನು ಮೊಟಕುಗೊಳಿಸಬಾರದು ಎಂದು ಮನವಿ ಮಾಡಿಕೊಂಡಿದ್ದರು.

ಆದರೆ ಕೊರೋನಾ ಹಿನ್ನೆಲೆಯಲ್ಲಿ ಪ್ರಶ್ನೋತ್ತರ ಅವಧಿಯನ್ನು ನಡೆಸಲು ಸಾಧ್ಯವಿಲ್ಲ ಎಂದು ಪರಿಸ್ಥಿತಿಯನ್ನು ವಿವರಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿರೋಧ ಪಕ್ಷದ ನಾಯಕರಾದ ಗುಲಾಂ ನಬಿ ಆಜಾದ್, ಅಧೀರ್ ರಂಜನ್ ಚೌಧರಿ, ಬಿಜು ಜನತಾ ದಳದ ಪಿನಾಕಿ ಮಿಶ್ರಾ, ಓಬ್ರಿಯನ್ ಮೊದಲಾದವರನ್ನು ಕರೆದು ಮನವೊಲಿಸುವ ಪ್ರಯತ್ನ ಮಾಡಿದ್ದರು.

SCROLL FOR NEXT