ದೇಶ

ಸಿಆರ್ ಪಿಎಫ್ ಸಿಬ್ಬಂದಿಗೆ ಸ್ಮಾರ್ಟ್ ಫೋನ್ ಬಳಕೆಗೆ ಹೊಸ ಮಾರ್ಗಸೂಚಿ ಪ್ರಕಟ:ಏನು ಹೇಳುತ್ತದೆ ನಿಯಮ?

Sumana Upadhyaya

ನವದೆಹಲಿ: ಸ್ಮಾರ್ಟ್ ಫೋನ್ ಮತ್ತು ಮೊಬೈಲ್ ಫೋನ್ ಬಳಕೆಗೆ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್) ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರ ಪ್ರಕಾರ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಅವುಗಳ ಬಳಕೆಯನ್ನು ನಿಷೇಧಿಸಲಾಗಿದೆ.

ಸಿಆರ್ ಪಿಎಫ್ ನ ಹೊಸ ಮಾರ್ಗಸೂಚಿ ಯೋಧರು, ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ. ಕಚೇರಿಗೆ ಬರುವಾಗ ಸ್ಮಾರ್ಟ್ ಫೋನ್ ತಂದಿದ್ದರೆ ಅದನ್ನು ನಿಗದಿತ ಕೌಂಟರ್ ನಲ್ಲಿ ಇಟ್ಟು ಬರಬೇಕು, ಸಿಬ್ಬಂದಿ ತಮ್ಮ ಜತೆ ಒಯ್ಯುವಂತಿಲ್ಲ ಎಂದು ಹೇಳಲಾಗಿದೆ.

ಅಂಕಿಅಂಶಗಳನ್ನು, ದಾಖಲೆಗಳನ್ನು ಸ್ಮಾರ್ಟ್ ಫೋನ್ ಗಳು ಸಂಗ್ರಹಿಸುವುದರಿಂದ ಕಚೇರಿ ಸಮಯ, ಕಾನ್ಫರೆನ್ಸ್ ಹಾಲ್‌ಗಳು, ಕಾರ್ಯಾಚರಣೆ ಕೊಠಡಿಗಳಲ್ಲಿ ಬಳಸುವಂತಿಲ್ಲ ಎಂದು ಮಾರ್ಗಸೂಚಿ ಹೇಳುತ್ತದೆ.

ಸಿಆರ್ ಪಿಎಫ್ ನಲ್ಲಿ ಸುರಕ್ಷತೆಗಾಗಿ, ಗೌಪ್ಯ ಮಾಹಿತಿ ಹೊರಗೆ ಸೋರಿಕೆಯಾಗದಿರಲೆಂದು ಈ ಮಾರ್ಗಸೂಚಿ ಹೊರಡಿಸಲಾಗಿದೆ. ಮಾಹಿತಿ ಸುರಕ್ಷತೆ ಗೌಪ್ಯತೆ, ಸಮಗ್ರತೆ ಮತ್ತು ಲಭ್ಯತೆಯನ್ನು ಹೊಂದಿರಬೇಕು ಎಂದು ಸಿಆರ್ ಪಿಎಫ್ ಮಾರ್ಗಸೂಚಿ ಹೇಳುತ್ತದೆ.

ಸಿಆರ್ ಪಿಎಫ್ ಫೋನ್ ನ್ನು ಸ್ಮಾರ್ಟ್ ಫೋನ್ ಮತ್ತು ಮೊಬೈಲ್ ಫೋನ್ ಎಂದು ಎರಡು ವಿಭಾಗ ಮಾಡಿದ್ದು, ರೆಕಾರ್ಡ್ ಮಾಡುವ ಸೌಲಭ್ಯ, ಕ್ಯಾಮರಾ ಮತ್ತು ಇಂಟರ್ನೆಟ್ ಸೌಲಭ್ಯಗಳಲ್ಲಿ ಇವುಗಳ ಮಧ್ಯೆ ವ್ಯತ್ಯಾಸವಿರುತ್ತದೆ. ಇನ್ನು ಬಳಕೆ ಬಗ್ಗೆ ಹೊಸ ಮಾರ್ಗಸೂಚಿಯಲ್ಲಿ ಮೂರು ವರ್ಗಗಳನ್ನಾಗಿ ಮಾಡಲಾಗಿದ್ದು ಅತ್ಯಧಿಕ, ಮಧ್ಯಮ ಮತ್ತು ಕಡಿಮೆ ಸೂಕ್ಷ್ಮ ಪ್ರದೇಶಗಳೆಂದು ವಿಭಾಗಿಸಿದೆ.

ಮಧ್ಯಮ ಸೂಕ್ಷ್ಮ ಪ್ರದೇಶಗಳೆಂದರೆ, ಕರ್ತವ್ಯ ಮತ್ತು ಆಡಳಿತಾತ್ಮಕ ಬ್ಲಾಕ್, ಫೀಲ್ಡ್ ಡ್ಯೂಟಿ, ಕಾರ್ಯಾಚರಣೆಗಳು ಮತ್ತು ಆಸ್ಪತ್ರೆಗಳ ನಿರ್ದಿಷ್ಟ ಶಾಖೆಗಳಂತೆ ಗೌಪ್ಯ ದಾಖಲೆಗಳನ್ನು ನೇರವಾಗಿ ನಿರ್ವಹಿಸುವ ಸೌಲಭ್ಯದ ನಿರ್ದಿಷ್ಟ ಪ್ರದೇಶವನ್ನು ಒಳಗೊಂಡಿದೆ.

ಮುಖ್ಯಸ್ಥರ ಅನುಮೋದನೆಯ ನಂತರವೇ ಸ್ಮಾರ್ಟ್‌ಫೋನ್‌ ಬಳಸಲು ಅನುಮತಿ ನೀಡಲಾಗುತ್ತದೆ. ಮೊಬೈಲ್ ಫೋನ್‌ಗಳನ್ನು ಕರೆಗಳಿಗೆ ಬಳಸಲು ಅನುಮತಿ ಕೊಡಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಗೌಪ್ಯತೆಯ ಪ್ರಜ್ಞೆ / ಕರ್ತವ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಿಬ್ಬಂದಿಗೆ ಸಿಆರ್ ಪಿಎಫ್ ಹೇಳಿದೆ.

ಮೊಬೈಲ್ ಫೋನ್‌ಗಳ ಮೂಲಕ ಮಾಹಿತಿಯನ್ನು ಹಂಚಿಕೊಳ್ಳುವ ಮಾರ್ಗಸೂಚಿಗಳು ಫೋನ್‌ಗಳಿಗಾಗಿ ಈಗಾಗಲೇ ನೀಡಲಾದ ಮಾರ್ಗಸೂಚಿಗಳಂತೆಯೇ ಇರುತ್ತದೆ. ಯಾವುದೇ ಸಾಂಸ್ಥಿಕ ಗೌಪ್ಯ ಮಾಹಿತಿಯನ್ನು ದಾಖಲಿಸುವುದನ್ನು ಮೊಬೈಲ್ ಕ್ಯಾಮೆರಾ ಅಥವಾ ರೆಕಾರ್ಡರ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕರ್ತವ್ಯದಲ್ಲಿರುವಾಗ, ಫೋನ್‌ಗಳನ್ನು ಬಳಸುವಲ್ಲಿ ಸಿಬ್ಬಂದಿ ವಿವೇಚನೆ ತೋರಿಸಬೇಕು ಎಂದು ಹೇಳಲಾಗುತ್ತದೆ.

ಕೆಲಸದ ಸಮಯದಲ್ಲಿ ಅತಿಯಾದ ವೈಯಕ್ತಿಕ ಕರೆಗಳು ಕಚೇರಿ ಕೆಲಸಕ್ಕೆ ಅಡ್ಡಿಯಾಗಬಹುದು ಮತ್ತು ಇತರ ಸಿಬ್ಬಂದಿಗಳಿಗೆ ತೊಂದರೆಯಾಗಬಹುದು ಎಂದು ಸಿಆರ್‌ಪಿಎಫ್ ತನ್ನ ಸ್ಮಾರ್ಟ್‌ಫೋನ್ ಮಾರ್ಗಸೂಚಿಗಳಲ್ಲಿ ತಿಳಿಸಿದೆ.

ಸಿಆರ್ಪಿಎಫ್ ತನ್ನ ವಿವರವಾದ ಮಾರ್ಗಸೂಚಿಗಳಲ್ಲಿ ತನ್ನ ಸಿಬ್ಬಂದಿಗಳು ಸಾಮಾಜಿಕ ಮಾಧ್ಯಮ ಬಳಸುವ ಬಗ್ಗೆ ಕೂಡ ವಿವರಣೆ ನೀಡಿದ್ದು, ಸರ್ಕಾರಿ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳು, ಬ್ಲಾಗ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವ ಎಲ್ಲ ವಿಷಯಗಳಿಗೆ ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ ಎಂದು ಹೇಳಿದೆ.

SCROLL FOR NEXT