ದೇಶ

ವಿವಿಐಪಿ ಚಾಪರ್ ಹಗರಣ: ಮಾಜಿ ಸಿಎಜಿ ಶಶಿಕಾಂತ್ ಶರ್ಮಾ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ ಸಿಬಿಐ

Lingaraj Badiger

ನವದೆಹಲಿ: ಅಗಸ್ಟಾವೆಸ್ಟ್ ಲ್ಯಾಂಡ್ ವಿವಿಐಪಿ​ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ರಕ್ಷಣಾ ಕಾರ್ಯದರ್ಶಿ ಮತ್ತು ಮಾಜಿ ಲೆಕ್ಕಪರಿಶೋಧಕ ನಿಯಂತ್ರಕ(ಸಿಎಜಿ) ಶಶಿ ಕಾಂತ್ ಶರ್ಮಾ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಿಬಿಐ ಮನವಿ ಮಾಡಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 3,600 ಕೋಟಿ ರೂ. ಮೊತ್ತದ ಅಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಶರ್ಮಾ ಅವರಲ್ಲದೆ, ಮಾಜಿ ಏರ್ ವೈಸ್ ಮಾರ್ಷಲ್ ಜಸ್ಬೀರ್ ಸಿಂಗ್ ಪಣೇಸರ್ ಅವರನ್ನು ಕೂಡ ವಿಚಾರಣೆ ನಡೆಸಲು ಸಿಬಿಐ ಅನುಮತಿ ಕೇಳಿದೆ. ಇದರ ಜತೆಗೆ ಐಎಎಫ್ ಅಧಿಕಾರಿಗಳಾದ ಡೆಪ್ಯುಟಿ ಚೀಫ್ ಟೆಸ್ಟ್ ಪೈಲಟ್ ಎಸ್‌.ಎ, ಕುಂಟೆ, ವಿಂಗ್ ಕಮಾಂಡರ್ ಥಾಮಸ್ ಮ್ಯಾಥ್ಯೂ ಹಾಗೂ ಎಕ್ಸ್ ಗ್ರೂಪ್ ಕ್ಯಾಪ್ಟನ್ ಎನ್. ಸಂತೋಷ್ ಅವರನ್ನು ವಿಚಾರಣೆಗೊಳಪಡಿಸಲು ಬಯಸಿದೆ.

ಯುಪಿಎ-2ರ ಅವಧಿಯಲ್ಲಿ ನಡೆದ ವಿವಿಐಪಿ ಹೆಲಿಕಾಪ್ಟರ್ ಖರೀದಿ ಪ್ರಕ್ರಿಯೆಯಲ್ಲಿ ಈ ಐವರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದರು ಮತ್ತು ಸಕ್ರಿಯವಾಗಿ ಭಾಗಿಯಾಗಿದ್ದರು ಎಂದು ಸಿಬಿಐ ಹೇಳಿದೆ. 

ಐವರು ಅಧಿಕಾರಿಗಳು ಮಾಡಿದ ಅವ್ಯವಹಾರದ ಕುರಿತು ಅಗತ್ಯ ಪುರಾವೆಗಳನ್ನು ರಕ್ಷಣಾ ಸಚಿವಾಲಯಕ್ಕೆ ಸಿಬಿಐ ಸಲ್ಲಿಸಿದೆ. 

SCROLL FOR NEXT