ದೇಶ

ದೆಹಲಿ ಗಲಭೆ: ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ಯೆಚೂರಿ, ಯೋಗೇಂದ್ರ ಯಾದವ್, ಜಯತಿ ಘೋಷ್ ಅಪೂರ್ವಾನಂದ ಹೆಸರು

Srinivas Rao BV

ನವದೆಹಲಿ: ಸಿಎಎ ವಿರೋಧಿಸಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿರುವ ದೆಹಲಿ ಪೊಲೀಸರು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸ್ವರಾಜ್ ಅಭಿಯಾನ್ ನಾಯಕ ಯೋಗೇಂದ್ರ ಯಾದವ್, ಅರ್ಥಶಾಸ್ತ್ರಜ್ಞರಾದ ಜಯತಿ ಘೋಷ್, ದೆಹಲಿ ವಿವಿ ಪ್ರಾಧ್ಯಾಪಕ, ಕಾರ್ಯಕರ್ತ ಅಪೂರ್ವಾನಂದ್ ಹಾಗೂ ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ರಾಹುಲ್ ರಾಯ್ ಅವರುಗಳನ್ನು ಸಹ ಪಿತೂರಿದಾರರು ಎಂದು ಆರೋಪಿಸಿದ್ದಾರೆ. 

ಸಿಎಎ ವಿರೋಧಿಸಿ 2020 ರ ಫೆಬ್ರವರಿ ತಿಂಗಳಲ್ಲಿ ಈಶಾನ್ಯ ದೆಹಲಿಯಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. 

ಮೇಲೆ ಉಲ್ಲೇಖಿಸಿರುವ ಖ್ಯಾತನಾಮರು ಸಿಎಎ ಪ್ರತಿಭಟನಾ ನಿರತರಿಗೆ ಸಿಎಎ ವಿರೋಧಿಸಲು  "ಯಾವುದೇ ಮಟ್ಟಕ್ಕೆ" ಹೋಗುವಂತೆ ಹೇಳಿದ್ದರು, ಭಾರತ ಸರ್ಕಾರದ ಹೆಸರಿಗೆ ಮಸಿ ಬಳಿಯುವುದಕ್ಕೆ ಸಿಎಎ/ಎನ್ಆರ್ ಸಿ ಯನ್ನು ಮುಸ್ಲಿಂ ವಿರೋಧಿ ಎಂದು ಅಪಪ್ರಚಾರ ಮಾಡುವ ಪಿತೂರಿಯಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ದಾಖಲಿಸಲಾಗಿದೆ. 

ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಫೆ.23-26 ವರೆಗೆ 53 ಜನರು ಸಾವನ್ನಪ್ಪಿದ್ದು 581 ಜನರಿಗೆ ಗಾಯಗಳುಂಟಾಗಿತ್ತು, 97 ಜನರಿಗೆ ಗುಂಡೇಟು ತಗುಲಿತ್ತು.

ಮೂವರು ವಿದ್ಯಾರ್ಥಿಗಳು-ವುಮೆನ್ಸ್ ಕಲೆಕ್ಟೀವ್ ಪಿಂಜ್ರಾ ತೋಡ್ ಸದಸ್ಯರು ಹಾಗೂ ಜೆಎನ್ ಯು ವಿದ್ಯಾರ್ಥಿಗಳ ದೇವಾಂಗನ ಕಲಿತ ಹಾಗೂ ನತಾಶಾ ನರ್ವಾಲ್ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಗುಲ್ಫಿಶಾ ಫಾತೀಮಾ ಅವರ ಹೇಳಿಕೆಯ ಆಧಾರದಲ್ಲಿ ಮೇಲೆ ಹೇಳಿರುವ ಖ್ಯಾತನಾಮರ ಹೆಸರುಗಳನ್ನು ಹೆಚ್ಚುವರಿ ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ. 

ಈ ಮೂವರೂ ವಿದ್ಯಾರ್ಥಿಗಳ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಂಸತ್ ಅಧಿವೇಶನಕ್ಕೂ ಎರಡು ದಿನಗಳ ಮುನ್ನ ಚಾರ್ಜ್ ಶೀಟ್ ಬಹಿರಂಗಗೊಂಡಿರುವುದು ಕುತೂಹಲ ಮೂಡಿಸಿದೆ. 

ಯೆಚೂರಿ, ಯೋಗೇಂದ್ರ ಯಾದವ್ ಅವರುಗಳ ಹೆಸರುಗಳ ಹೊರತಾಗಿ ಭೀಮ್ ಆರ್ಮಿ ಮುಖ್ಯಸ್ಥರಾದ ಚಂದ್ರಶೇಖರ್, ಯುನೈಟೆಡ್ ಎಗೆನೆಸ್ಟ್ ಹೇಟ್ ಕಾರ್ಯಕರ್ತ ಉಮರ್ ಖಾಲಿದ್ ಸೇರಿದಂತೆ ಹಲವು ನಾಯಕರ ಹೆಸರುಗಳೂ ಕೇಳಿಬಂದಿವೆ. 

SCROLL FOR NEXT