ದೇಶ

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ  1.75 ಲಕ್ಷ ಮನೆಗಳನ್ನು ಉದ್ಘಾಟಿಸಿದ ಪಿಎಂ ಮೋದಿ

Raghavendra Adiga

ನವದೆಹಲಿ: ಮಧ್ಯಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ನಿರ್ಮಿಸಲಾದ 1.75 ಲಕ್ಷ ಮನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು.

ಪ್ರಧಾನಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಮನೆಗಳನ್ನು ಉದ್ಘಾಟಿಸಿದರು ಮತ್ತು ಈ ಯೋಜನೆಯಡಿ ಸವಲತ್ತುಗಳನ್ನು ಪಡೆದ ಧಾರ್, ಸಿಂಗ್ರೌಲಿ ಮತ್ತು ಗ್ವಾಲಿಯರ್ ಅವರ ಫಲಾನುಭವಿಗಳೊಂದಿಗೆ  ಸಂವಾದ ನಡೆಸಿದರು. ಯೋಜನೆಯ ಫಲಾನುಭವಿಗಳನ್ನು ಅಭಿನಂದಿಸಿದ ಪಿಎಂ ಮೋದಿ, "ಈ ದೀಪಾವಳಿ ಮತ್ತು ಇತರ ಹಬ್ಬಗಳಲ್ಲಿ ನಿಮ್ಮ ಆಚರಣೆ ಇನ್ನಷ್ಟು ಸಡಗರದಿಂದ ಕೂಡಿರಲಿದೆ. ಇದು ಕೊರೋನಾ ಕಾಲವಾಗಿರದೆ ಹೋಗಿದ್ದರೆ ನಿಮ್ಮ ಪ್ರಧಾನ ಸೇವಕ (ಪ್ರಧಾನಿ ಮೋದಿ) ನಿಮ್ಮ ನಡುವೆ ಇರುತ್ತಿದ್ದರು" ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಭಾರತೀಯ ಜನತಾ ಪಕ್ಷದ ಸಂಸದ ಜ್ಯೋತಿರಾದಿತ್ಯ  ಸಿಂಧಿಯಾ ಇತರರು ಭಾಗವಹಿಸಿದ್ದರು

"ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕಲ್ಯಾಣ ಯೋಜನೆಗಳ ಮೂಲಕ ದೇಶದ ದಿಕ್ಕು ಹಾಗೂ ಸ್ಥಾನಮಾನವನ್ನು ಬದಲಾಯಿಸಿದ್ದಾರೆ. ಇದಕ್ಕಾಗಿ  ಮಧ್ಯಪ್ರದೇಶದ ಜನರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ" ಎಂದು ಚೌಹಾನ್ ಹೇಳಿದರು.

"ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ನಾವು 20 ಲಕ್ಷ ಮನೆಗಳಲ್ಲಿ 17 ಲಕ್ಷ ಮನೆ ನಿರ್ಮಿಸಿದ್ದೇವೆ. ದೇಶದ ಪ್ರತಿಯೊಬ್ಬ ಬಡವರಿಗೆ ಸ್ವಂತ ಮನೆ ಇರಬೇಕು ಎನ್ನುವುದು  ಪ್ರಧಾನಮಂತ್ರಿ ಅವರ  ಕನಸು. ಅವರ ಆಶೀರ್ವಾದದಿಂದ ಮಧ್ಯಪ್ರದೇಶ ಈ ದಿಕ್ಕಿನಲ್ಲಿ ವೇಗವಾಗಿ ಮುನ್ನಡೆಯುತ್ತಿದೆ" ಎಂದು ಅವರು ಹೇಳಿದರು

SCROLL FOR NEXT