ದೇಶ

'ಈಶಾನ್ಯ ಲಡಾಖ್ ನ ಘರ್ಷಣಾ ಪ್ರದೇಶಗಳಲ್ಲಿನ ಪರಿಸ್ಥಿತಿ ಬದಲಾಗಿಲ್ಲ'

Srinivas Rao BV

ಲಡಾಖ್: ದೀರ್ಘಾವಧಿಯಿಂದ ಈಶಾನ್ಯ ಲಡಾಖ್ ನಲ್ಲಿ ಉಂಟಾಗಿರುವ ಗಡಿ ಘರ್ಷಣೆ ಬಗೆಹರಿಸಿಕೊಳ್ಳುವುದಕ್ಕೆ ಭಾರತ-ಚೀನಾ ವಿದೇಶಾಂಗ ಸಚಿವರು ಸಭೆ ನಡೆಸಿ 5 ಅಂಶಗಳ ಯೋಜನೆಯನ್ನು ಒಪ್ಪಿಕೊಂಡಿದ್ದರು. ಇದಾಗಿ ನಾಲ್ಕು ದಿನಗಳು ಕಳೆದರೂ ಸಹ ಈಶಾನ್ಯ ಲಡಾಖ್ ನ ಘರ್ಷಣೆಯ ಪ್ರದೇಶಗಳಲ್ಲಿನ ಪರಿಸ್ಥಿತಿ ಕಿಂಚಿತ್ತೂ ಬದಲಾವಣೆಯಾಗಿಲ್ಲ. 

ಸರ್ಕಾರಿ ಮೂಲಗಳ ಪ್ರಕಾರ ಘರ್ಷಣೆಯ ಪ್ರದೇಶಗಳಲ್ಲಿ ಇನ್ನೂ ಚೀನಾ ಸೇನೆಯನ್ನು ವಾಪಸ್ ಕರೆಸಿಕೊಂಡಿಲ್ಲ.  ಇತ್ತ ಭಾರತವೂ ಸಹ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳದೇ ಚೀನಾವನ್ನು ಹಿಮ್ಮೆಟ್ಟಿಸುವವರೆಗೂ ಹಿಂತಿರುಗುವುದಿಲ್ಲ ಎಂಬ ಬಿಗಿಪಟ್ಟು ಹಿಡಿದು ಕುಳಿತಿದೆ. ಪರಿಣಾಮವಾಗಿ ಎಲ್ಎಸಿಯಲ್ಲಿ ಎರಡೂ ಪಡೆಗಳು ತಮ್ಮ ಬಿಗಿಪಟ್ಟುಗಳನ್ನು ಸಡಿಲಿಸದ ಪರಿಣಾಮವಾಗಿ ಪರಿಸ್ಥಿತಿ ಹಾಗೆಯೇ ಮುಂದುವರೆದಿದೆ ಎನ್ನುತ್ತಿವೆ ಸರ್ಕಾರಿ ಮೂಲಗಳು. 

ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಹಾಗೆಯೇ ಮುಂದುವರೆದಿದ್ದರೂ ಸಹ ಹೊಸದಾಗಿ ಚೀನಾದ ಸೇನಾ ಸಿಬ್ಬಂದಿಗಳ ಚಟುವಟಿಕೆಗಳು ದಾಖಲಾಗಿಲ್ಲ ಎನ್ನುತ್ತಿವೆ ಮೂಲಗಳು. 

ಕಣ್ಣಿಗೆ ಕಾಣುವಂತೆ ಚೀನಾದ ನಿಲುವಿನಲ್ಲಿ ಬದಲಾವಣೆಯಾಗದೇ ಭಾರತೀಯ ಸೇನೆ ಈಶಾನ್ಯ ಲಡಾಖ್ ನಲ್ಲಿ ಉನ್ನತ ಮಟ್ಟದ ಯುದ್ಧ ಸನ್ನದ್ಧತೆಯನ್ನು ಹಾಗೂ ತನ್ನ ಸೇನಾಪಡೆಯ ಯಥಾಸ್ಥಿತಿಯನ್ನು ಬದಲಾಯಿಸಿ ಸಿಬ್ಬಂದಿಗಳನ್ನು ಕಡಿತಗೊಳಿಸುವ ಮಾತೇ ಇಲ್ಲ ಎನ್ನುತ್ತಿವೆ ಸರ್ಕಾರಿ ಮೂಲಗಳು. 

ಈ ನಡುವೆ ಬಹುನಿರೀಕ್ಷಿತ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳು ಉಭಯ ಸೇನೆಗಳ ನಡುವೆ ನಡೆಯುವುದಿದ್ದು ಕೆಲವೇ ದಿನಗಳಲ್ಲಿ ನಡೆಯಲಿದೆ ಈ ವೇಳೆ ಪ್ರಕ್ಷುಬ್ಧ ಪರಿಸ್ಥಿತಿಯನ್ನು ತಿಳಿಗೊಳಿಸಲು 5 ಅಂಶಗಳ ಒಮ್ಮತಕ್ಕೆ ಬರಲು ಕೆಲವು ನಿಬಂಧನೆಗಳ ಅನುಷ್ಠಾನ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ. 

SCROLL FOR NEXT