ದೇಶ

ಕೃಷಿ ಕ್ಷೇತ್ರದ ಸುಧಾರಣೆ: ಲೋಕಸಭೆಯಲ್ಲಿ ಅಗತ್ಯ ಸರಕುಗಳ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರ

Srinivas Rao BV

ನವದೆಹಲಿ: ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಅಗತ್ಯ ಸರಕುಗಳ ಕಾಯ್ದೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆಯುವುದರಲ್ಲಿ ಯಶಸ್ವಿಯಾಗಿದೆ. 

ಬಿಜೆಪಿ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳವೂ ಸೇರಿದಂತೆ ವಿಪಕ್ಷಗಳ ಪ್ರತಿಭಟನೆಯ ನಡುವೆಯೇ ಕೇಂದ್ರ ಸರ್ಕಾರ ಮಸೂದೆಗೆ ಅಂಗೀಕಾರ ಪಡೆದಿದೆ. 

ತಿದ್ದುಪಡಿ ಕಾಯ್ದೆಯಲ್ಲಿ ಧಾನ್ಯ, ಕಾಳುಗಳು, ಈರುಳ್ಳಿ ಸೇರಿದಂತೆ ಆಹಾರ ಪದಾರ್ಥಗಳ ಮೇಲಿನ ನಿಯಂತ್ರಣವನ್ನು ತೆಗೆದುಹಾಕುವ ಪ್ರಸ್ತಾವನೆ ಇದೆ. ತಿದ್ದುಪಡಿ ಕಾಯ್ದೆಯ ಮೂಲಕ ಕೃಷಿ ಕ್ಷೇತ್ರದ ಸುಧಾರಣೆ ಹಾಗೂ ರೈತರ ಆದಾಯವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರ ತಿಳಿಸಿದೆ. 

ಚರ್ಚೆಯಲ್ಲಿ ಮಾತನಾಡಿರುವ ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ರಾವ್ ಸಾಹೇಬ್ ಪಾಟೀಲ್ ದನ್ವೆ ಮಾತನಾಡಿ, ಈ ಕಾಯ್ದೆಯಿಂದ ರೈತರಿಗೆ ಉಪಯೋಗವಾಗುತ್ತದೆ, ಕೃಷಿ ಕ್ಷೇತ್ರದ ಮೂಲಸೌಕರ್ಯವನ್ನು ಉತ್ತೇಜಿಸಲಿದೆ ಎಂದು ಹೇಳಿದ್ದಾರೆ. 

ಈ ಕಾಯ್ದೆಯ ಮೂಲಕ ಖಾಸಗಿ ಹೂಡಿಕೆಯೂ ಕೃಷಿ ಕ್ಷೇತ್ರದಲ್ಲಿ ಹೆಚ್ಚಲಿದ್ದು 2022 ರ ವೇಳೆಗೆ ಭಾರತದ ರೈತರ ಆದಾಯ ದ್ವಿಗುಣಗೊಳಿಸುವ ಸರ್ಕಾರದ ಉದ್ದೇಶಕ್ಕೂ ಈ ಕಾಯ್ದೆ ನೆರವಾಗಲಿದೆ ಎಂದು ಹೇಳಿದ್ದಾರೆ. ಆದರೆ ಈ ಕಾಯ್ದೆಯನ್ನು ವಿಪಕ್ಷಗಳು ರೈತ ವಿರೋಧಿ ಕಾಯ್ದೆಯೆಂದೇ ವಿರೋಧಿಸಿವೆ. 

ಬಿಜೆಪಿ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳದ ನಾಯಕ ಸುಕ್ಬೀರ್ ಸಿಂಗ್ ಬಾದಲ್ ಮಾತನಾಡಿ, ಈ ಸುಗ್ರೀವಾಜ್ಞೆಗಳ ಚರ್ಚೆಯ ವೇಳೆ ಕೇಂದ್ರ ಸಚಿವರೂ ಆಗಿರುವ ಪಕ್ಷದ ಪ್ರತಿನಿಧಿ ಹರ್ಸಿಮ್ರತ್ ಕೌರ್ ಬಾದಲ್ ಈ ಕಾಯ್ದೆಗೆ ಸಂಬಂಧಿಸಿದಂತೆ ಆಕ್ಷೇಪಗಳನ್ನು ಎತ್ತಿದ್ದರು. ಅಷ್ಟೇ ಅಲ್ಲದೇ ಬದಲಾವಣೆಗೆ ಕ್ರಮ ಕೈಗೊಳ್ಳಬೇಕೆಂದೂ ಕೇಳಿದ್ದರು. ಯಾವುದೇ ಬೆಲೆ ತೆರಬೇಕಾಗಿಬಂದರೂ ಪಕ್ಷದ ನಿಲುವನ್ನು ಸಡಿಲಿಸುವುದಿಲ್ಲ ಎಂದು ಬಾದಲ್ ಲೋಕಸಭೆಯಲ್ಲಿ ತಿಳಿಸಿದ್ದಾರೆ. 

SCROLL FOR NEXT