ದೇಶ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸೆ.30ಕ್ಕೆ ತೀರ್ಪು, ಅಡ್ವಾಣಿ ಸೇರಿ ಎಲ್ಲಾ ಆರೋಪಿಗಳು ಹಾಜರಿರಬೇಕು

Lingaraj Badiger

ಲಖನೌ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 30 ರಂದು ಪ್ರಕಟಿಸಲಿದ್ದು, ಅಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಸೇರಿದಂತೆ ಎಲ್ಲಾ ಆರೋಪಿಗಳು ಕೋರ್ಟ್ ನಲ್ಲಿ ಹಾಜರಿರಬೇಕು ಎಂದು ಸೂಚಿಸಲಾಗಿದೆ.

ನ್ಯಾಯಾಧೀಶ ಎಸ್.ಕೆ. ಯಾದವ್ ಅವರು 28 ವರ್ಷಗಳ ಹಳೆಯ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಸೆಪ್ಟೆಂಬರ್ 30ಕ್ಕೆ ಪ್ರಕಟಿಸುವುದಾಗಿ ಬುಧವಾರ ತಿಳಿಸಿದ್ದು, ಅಂದು ಎಲ್ಲಾ 32 ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶಿಸಿದ್ದಾರೆ.

ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಮತ್ತು ಬಿಜೆಪಿ ನಾಯಕರಾದ ಎಂ ಎಂ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಹಾಗೂ ವಿನಯ್ ಕಟಿಯಾರ್ ಸೇರಿದಂತೆ 32 ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.

ಸೆಪ್ಟೆಂಬರ್ 1 ರಂದು ವಾದ-ಪ್ರತಿವಾದ ಮುಕ್ತಾಯಗೊಂಡಿದ್ದು, ನಂತರ ವಿಶೇಷ ನ್ಯಾಯಾಧೀಶರು ತೀರ್ಪು ಬರೆಯಲು ಪ್ರಾರಂಭಿಸಿದರು ಎಂದು ಸಿಬಿಐ ವಕೀಲ ಲಲಿತ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಸಿಬಿಐ ಒಟ್ಟು 351 ಸಾಕ್ಷಿಗಳು ಮತ್ತು ಸುಮಾರು 600 ಸಾಕ್ಷ್ಯಚಿತ್ರಗಳ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಕರಸೇವಕರು 1992 ರ ಡಿಸೆಂಬರ್ 6 ರಂದು ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು.

SCROLL FOR NEXT