ದೇಶ

ಸಂಸದರ ವೇತನ 30% ಕಡಿತ, ಪ್ರದೇಶಾಭಿವೃದ್ಧಿ ನಿಧಿ 2 ವರ್ಷ ಸ್ಥಗಿತ: ಮಸೂದೆಗೆ ಲೋಕಸಭೆ ಅನುಮೋದನೆ

Shilpa D

ನವದೆಹಲಿ: ಕೋವಿಡ್‌ - 19 ಸಾಂಕ್ರಾಮಿಕ ಹಾವಳಿಯಿಂದ ಉಂಟಾಗಿರುವ ಹಣಕಾಸು ಬಿಕ್ಕಟ್ಟು ನಿಭಾಯಿಸಲು ಸಂಸದರ ವೇತನದಲ್ಲಿ ಶೇ. 30ರಷ್ಟು ಕಡಿತಗೊಳಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ತಿದ್ದುಪಡಿ ವಿಧೇಯಕ್ಕೆ ಮಂಗಳವಾರ ಲೋಕಸಭೆ ಅನುಮೋದನೆ ನೀಡಿದೆ.

ಸಂಸತ್‌ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ ತಿದ್ದುಪಡಿ ವಿಧೇಯವನ್ನು ಸೋಮವಾರ ಕೆಳಮನೆಯಲ್ಲಿ ಮಂಡಿಸಲಾಗಿತ್ತು. ವೇತನ ಕಡಿತಕ್ಕೆ ಸಂಬಂಧಿಸಿದಂತೆ ಈ ಮೊದಲು ಜಾರಿಗೊಳಿಸಲಾಗಿದ್ದ ಸುಗ್ರೀವಾಜ್ಞೆಗೆ ಇದು ಪರ್ಯಾಯವಾಗಲಿದೆ.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನೂ 2020-21, 2021-22ನೇ ಸಾಲಿಗೆ ಸ್ಥಗಿತಗೊಳಿಸಲಾಗುವುದು. ಇದು ಎರಡು ವರ್ಷಕ್ಕೆ ಸೀಮಿತವಾಗಿರುವ ತಾತ್ಕಾಲಿಕ ವ್ಯವಸ್ಥೆ ಎಂದು ಅವರು ಸ್ಪಷ್ಟಪಡಿಸಿದರು. ವೇತನ ಕಡಿತ ಸಂಬಂಧ ಕೇಂದ್ರ ಸರಕಾರವು ಏ.6ರಂದೇ ಸುಗ್ರೀವಾಜ್ಞೆ ಹೊರಡಿಸಿದೆ.

ಕೇಂದ್ರ ಸರ್ಕಾರವು ಇದಕ್ಕೂ ಮೊದಲು 2020ರ ಮಂತ್ರಿಗಳ ವೇತನ ಮತ್ತು ಭತ್ಯೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಿತ್ತು. ಈ ವರ್ಷದ ಏಪ್ರಿಲ್.1ರಿಂದ ಪ್ರಾರಂಭದಿಂದ ಒಂದು ವರ್ಷದ ಅವಧಿಗೆ ಪ್ರತಿ ಸಚಿವರಿಗೆ ಪಾವತಿಸಬೇಕಾದ ಸಂಪೂರ್ಣ ಭತ್ಯೆಯಲ್ಲಿ ಶೇ.30ರಷ್ಟು ಕಡಿತಗೊಳಿಸಲಾಗುತ್ತದೆ.

ಕಳೆದ ಏಪ್ರಿಲ್.05ರಂದು ನಡೆದ ಕೇಂದ್ರ ಸಚಿವರ ಸಂಪುಟ ಸಭೆಯಲ್ಲಿ ಸಂಸದರು ಮತ್ತು ಸಚಿವರ ವೇತನ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚಿಸಲಾಗಿತ್ತು. ಸಚಿವರ ಭತ್ಯೆ, ಪಿಂಚಣಿಯನ್ನು ಶೇ.30ರಷ್ಟು ಕಡಿತಗೊಳಿಸುವ ತೀರ್ಮಾನಿಸಲಾಗಿತ್ತು. ಸಂಸದರ ಪ್ರಾದೇಶಿಕ ಅಭಿವೃದ್ಧಿ ಯೋಜನೆಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲು ಮತ್ತು ಮೊತ್ತವನ್ನು ಸರ್ಕಾರದ ಏಕೀಕೃತ ನಿಧಿಗೆ ವರ್ಗಾಯಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

SCROLL FOR NEXT