ದೇಶ

ಆಕ್ಸ್ ಫರ್ಡ್ ಕೋವಿಡ್ ಲಸಿಕೆಯ ಪ್ರಯೋಗ ಮುಂದುವರೆಸಲು ಸೆರೆಮ್ ಇನ್ಸ್ ಟಿಟ್ಯೂಟ್ ಗೆ ಡಿಸಿಜಿಐ ಅನುಮತಿ

Srinivasamurthy VN

ನವದೆಹಲಿ: ಆಕ್ಸ್ ಫರ್ಡ್ ಕೋವಿಡ್ ಲಸಿಕೆಯ ಪ್ರಯೋಗ ಮುಂದುವರೆಸಲು ಸೆರೆಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮತಿ ನೀಡಿದೆ.

ಬ್ರಿಟನ್ ಮೂಲದ ಆಸ್ಟ್ರಾ ಜೆನಿಕಾ ಸಂಸ್ಥೆಯ ಕೋವಿಡ್ ಲಸಿಕೆ ಪ್ರಯೋಗದ ವೇಳೆ ಸ್ವಯಂಸೇವಕರಲ್ಲಿ ಆರೋಗ್ಯ ವ್ಯತ್ಯಯ ಕಂಡುಬಂದ ಹಿನ್ನಲೆಯಲ್ಲಿ ಭಾರತದಲ್ಲೂ ಮುಂಜಾಗ್ರತಾ ಕ್ರಮವಾಗಿ ಲಸಿಕೆಗಳ ಪ್ರಯೋಗಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಕಳೆದ ಶನಿವಾರ ಬ್ರಿಟನ್ ಸರ್ಕಾರ ಆಸ್ಟ್ರಾ ಜೆನಿಕಾ  ಸಂಸ್ಥೆಯ ಕೋವಿಡ್ ಲಸಿಕೆ ಪ್ರಯೋಗ ಮುಂದುವರೆಸಲು ಅನುಮತಿ ನೀಡಿದೆ. ಬ್ರಿಟನ್ ನ ಮೆಡಿಸಿನ್ ಹೆಲ್ತ್ ರೆಗ್ಯುಲೇಟರಿ ಅಥಾರಿಟಿ ಆಸ್ಟ್ರಾ ಜೆನಿಕಾ ಸಂಸ್ಥೆಯ ಕೋವಿಡ್ ಲಸಿಕೆ ಪ್ರಯೋಗ ಸುರಕ್ಷಿತವಾಗಿದೆ ಎಂದು ವರದಿ ನೀಡಿದ ಬಳಿಕ ಬ್ರಿಟನ್ ಸರ್ಕಾರ ಈ ಅನುಮತಿ ನೀಡಿದೆ.

ಹೀಗಾಗಿ ಇದೀಗ ಭಾರತದಲ್ಲಿ ಕೋವಿಡ್ ಲಸಿಕೆಗಳ ಪ್ರಯೋಗ ಮುಂದುವರೆಯಲಿದ್ದು, ಆಕ್ಸ್ ಫರ್ಡ್ ಕೋವಿಡ್ ಲಸಿಕೆಯ ಪ್ರಯೋಗ ಮುಂದುವರೆಸಲು ಸೆರೆಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ DCGI ಅನುಮತಿ ನೀಡಿದೆ. ಆದರೆ ಈ ಅನುಮತಿಗೂ ಡಿಸಿಜಿಐ ಹಲವು ಷರತ್ತುಗಳನ್ನು ವಿಧಿಸಿದ್ದು, ಸ್ಕ್ರೀನಿಂಗ್  ಸಮಯದಲ್ಲಿ ಸ್ವಯಂಸೇವಕರ ಹೆಚ್ಚಿನ ಕಾಳಜಿ ವಹಿಸುವುದು, ಸ್ವಯಂಸೇವಕರೊಂದಿಗೆ ಒಪ್ಪಿಗೆ ಪ್ರಮಾಣ ಪತ್ರದಲ್ಲಿ ಪ್ರಯೋಗದ ಕುರಿತು ಹೆಚ್ಚಿನ ಮಾಹಿತಿ ನೀಡುವುದು, ಪ್ರತಿಕೂಲ ಘಟನೆಗಳಿಗೆ ನಿಕಟ ಮೇಲ್ವಿಚಾರಣೆ, ಸ್ವಯಂ ಸೇವಕರ ಫಾಲೋಅಪ್ ತನಿಖಾ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಬಳಿಕ  ಮುಂದಿನ ಕ್ರಮ ಅನುಸರಿಸಬೇಕು ಎಂಬಿತ್ಯಾದಿ ಅಂಶಗಳು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. 

ಸೆರೆಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ತನ್ನ ಆಕ್ಸ್ ಫರ್ಡ್ ಲಸಿಕೆಯ 2 ಮತ್ತು ಮೂರನೇ ಹಂತದ ಪ್ರಯೋಗಕ್ಕೆ ಸ್ವಯಂ ಸೇವಕರ ನೇಮಕಾತಿಗೆ ಮುಂದಾಗಿತ್ತು. ಆದರೆ ಆಸ್ಟ್ರಾ ಜೆನಿಕಾ ಘಟನೆ ಬಳಿಕ ಲಸಿಕೆ ಪ್ರಯೋಗ ಸಂಬಂಧ ಹೊಸ ನೇಮಕಾತಿ (ಸ್ವಯಂ ಸೇವಕರು) ಮಾಡಿಕೊಳ್ಳದಂತೆ ಸೆರೆಮ್ ಇನ್ಸ್  ಟಿಟ್ಯೂಟ್ ಆಫ್ ಇಂಡಿಯಾಗೆ ಡಿಸಿಜಿಐ ಸೂಚನೆ ನೀಡಿತ್ತು. 

SCROLL FOR NEXT