ನವದೆಹಲಿ: ಕೊರೋನಾ ಸಾಂಕ್ರಾಮಿಕ ವೇಳೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶಗಳಲ್ಲಿ ಸಂಕಷ್ಟಕ್ಕೀಡಾಗಿದ್ದ 14 ಲಕ್ಷಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ಕರೆತರಲಾಗಿದೆ. ಈ ಮಿಷನ್ ಇನ್ನೂ ಚಾಲ್ತಿಯಲ್ಲಿದ್ದು ಮತ್ತಷ್ಟು ಅನಿವಾಸಿಗಳನ್ನು ಕರೆತರಲಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿ ಮುರಳೀಧರನ್ ಅವರು ರಾಜ್ಯಸಭೆಗೆ ಹೇಳಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದ ಮುರಳೀಧರನ್ ಅವರು, ಕೊರೋನಾ ಸಾಂಕ್ರಾಮಿಕ ಆರಂಭವಾದ ದಿನದಿಂದ ಇಂದಿನವರೆಗೂ ವಿದೇಶಗಳಲ್ಲಿ ಅತಂತ್ರರಾಗಿದ್ದ 14,12,835 ಮಂದಿ ಅನಿವಾಸಿ ಭಾರತೀಯರನ್ನು ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಭಾರತಕ್ಕೆ ಕರೆತರಲಾಗಿದೆ. ಈ ಪೈಕಿ 56,874 ವಿದ್ಯಾರ್ಥಿಗಳೂ ಕೂಡ ಸೇರಿದ್ದಾರೆ. ಅಂತೆಯೇ ಇದೇ ಯೋಜನೆ ಅಡಿಯಲ್ಲಿ ಭಾರತಕ್ಕೆ ಬಂದ ಅನಿವಾಸಿಗಳ ಪೈಕಿ 3,248 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಅಂತೆಯೇ ಈ ಮಿಷನ್ ಇನ್ನೂ ಚಾಲ್ತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅನಿವಾಸಿಗಳನ್ನು ಭಾರತಕ್ಕೆ ಕರೆ ತರಲಾಗುತ್ತದೆ ಎಂದು ಹೇಳಿದ್ದಾರೆ.
ಭಾರತೀಯ ಸಮುದಾಯ ಕಲ್ಯಾಣ ನಿಧಿಯಿಂದ (ಐಸಿಡಬ್ಲ್ಯುಎಫ್) ತೊಂದರೆಯಲ್ಲಿರುವ 62,000 ಭಾರತೀಯ ಪ್ರಜೆಗಳಿಗೆ ವಿದೇಶಗಳಲ್ಲಿನ ಭಾರತೀಯ ಮಿಷನ್‌ಗಳು ಸಹಾಯ ಮಾಡಿವೆ ಎಂದು ಮುರಳೀಧರನ್ ಹೇಳಿದ್ದಾರೆ.
ಇದೇ ವೇಳೆ ಭಾರತೀಯ ಭೂ ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡು ನಕ್ಷೆ ಪ್ರಕಟಿಸುವ ಪಾಕಿಸ್ತಾನ ನಡೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿಂದೆ ಆಗಸ್ಟ್ 4ರಂದು ಪಾಕಿಸ್ತಾನ ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಭೂಭಾಗಗಳನ್ನು ಹೊಂದಿರುವ ನಕ್ಷೆಯನ್ನು ಪಾಕಿಸ್ತಾನ ಜಾಗತಿಕ ವೇದಿಕೆಯಲ್ಲಿಟ್ಟಿತ್ತು. ಇದನ್ನು ವಿರೋಧಿಸಿ ಭಾರತ ಸಭೆಯಿಂದಲೇ ಹೊರ ನಡೆದಿತ್ತು.
ಕೋವಿಡ್-19ರ ದೃಷ್ಟಿಯಿಂದ ಹಲವಾರು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಸೋಮವಾರ ಪ್ರಾರಂಭವಾದ ಸಂಸತ್ತಿನ ಮಾನ್ಸೂನ್ ಅಧಿವೇಶನವು ಅಕ್ಟೋಬರ್ 1 ರಂದು ಮುಕ್ತಾಯಗೊಳ್ಳಲಿದೆ. ರಾಜ್ಯಸಭೆಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಪ್ರಕ್ರಿಯೆ ನಡೆಯುತ್ತಿದ್ದರೆ, ಲೋಕಸಭಾ ಸಭೆ ಮಧ್ಯಾಹ್ನ 3 ರಿಂದ ಸಂಜೆ 7 ರವರೆಗೆ ನಡೆಯುತ್ತಿದೆ.