ದೇಶ

ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ

Manjula VN

ನವದೆಹಲಿ: ರಾಜ್ಯಸಭಾ ಸದಸ್ಯರಾಗಿ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಭಾನುವಾರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 

ಇದೇ ಮೊದಲ ಬಾರಿಗೆ ಸಂಸತ್'ನ ಮುಂಗಾರು ಅಧಿವೇಶನ ಭಾನುವಾರ ಕೂಡ ನಡೆಯುತ್ತಿದೆ. ಇದರಂತೆ ಶನಿವಾರ ರಾತ್ರಿಯೇ ದೆಹಲಿಗೆ ತೆರಳಿದ್ದ ದೇವೇಗೌಡ ಅವರು ಇಂದು ಬೆಳಿಗ್ಗೆ 9 ಗಂಟೆಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು ದೇವೇಗೌಡ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.

ರಾಜ್ಯಸಭೆಯಲ್ಲಿ ತೆರವಾದ ನಾಲ್ಕು ಸ್ಥಾನಗಳಿಗಾಗಿ ಜೂನ್ 12ರಂದು ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ 87 ವರ್ಷದ ದೇವೇಗೌಡರು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. 

ಸಂಸತ್ತಿನ ಮೇಲ್ಮನೆಗೆ ನೂತನವಾಗಿ ಆಯ್ಕೆಯಾದ 61 ಸದಸ್ಯರಲ್ಲಿ 45 ಮಂದಿ ಜುಲೈ 22ರಂದು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅದರೆ ಅನಾರೋಗ್ಯ ಮತ್ತು ಹಿರಿಯ ನಾಗರಿಕರ ಪ್ರಮಾಣಕ್ಕೆ ಕೋವಿಡ್-19 ನಿರ್ಬಂಧಗಳು ಇದ್ದ ಕಾರಣ ಗೌಡರು ದೆಹಲಿಗೆ ತೆರಳಲು ಸಾಧ್ಯವಾಗಿರಲಿಲ್ಲ.

ವೈದ್ಯರ ಸಲಹೆ ಮೇರೆಗೆ ಮಾಜಿ ಪ್ರಧಾನಿ ಆಗ ಪ್ರಮಾಣವಚನ ಸಮಾರಂಭಕ್ಕೆ ಗೈರಾಗಿ, ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಿದ್ದರು. ಇದರಂತೆ ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. 

ದೇವೇಗೌಡರು 24 ವರ್ಷಗಳ ಬಳಿಕ ಎರಡನೇ ಬಾರಿ ರಾಜ್ಯಸಭೆ ಸದಸ್ಯರಾಗುತ್ತಿದ್ಧಾರೆ. 1996ರ ಜೂನ್‍ನಿಂದ 1997ರ ಏಪ್ರಿಲ್‍ವರೆಗೆ ಅವರು ಪ್ರಧಾನಮಂತ್ರಿಯಾಗಿದ್ದ ವೇಳೆ ಅವರು ಮೇಲ್ಮನೆಗೆ ಆಯ್ಕೆಯಾಗಿದ್ದರು.

SCROLL FOR NEXT